ನವದೆಹಲಿ: ವಿವಾದಿತ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ (ಆಗಸ್ಟ್ 30) ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಮ್ಮುಖದಲ್ಲಿ ಬ್ಯಾಂಕ್ ಲಾಕರ್ ಶೋಧ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ದೃಶ್ಯ ಮಾಧ್ಯಮದವರು ಏನಾಗಲಿದೆ ಎಂಬ ಕುತೂಹಲದಿಂದ ಭಾರೀ ಸಂಖ್ಯೆಯಲ್ಲಿ ಬ್ಯಾಂಕ್ ಹೊರಭಾಗದಲ್ಲಿ ಜಮಾಯಿಸಿದ್ದರಿಂದ ಅವ್ಯವಸ್ಥೆಗೆ ಎಡೆ ಮಾಡಿಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿರುದ್ಧ ಕೇಸ್ ಕೈಬಿಟ್ಟ ಸುಪ್ರೀಂ
ಗಾಜಿಯಾಬಾದ್ ನ ಸೆಕ್ಟರ್ 4ರ ವಸುಂಧರಾದಲ್ಲಿರುವ ಪಿಎನ್ ಬಿ ಶಾಖೆಗೆ ಸಿಬಿಐನ ಐವರು ಅಧಿಕಾರಿಗಳ ತಂಡ ಭೇಟಿ ನೀಡಿ ಶೋಧ ಕಾರ್ಯ ನಡೆಸಿರುವುದಾಗಿ ವರದಿ ವಿವರಿಸಿದೆ. ಈ ಸಂದರ್ಭದಲ್ಲಿ ಸಿಸೋಡಿಯಾ ಮತ್ತು ಪತ್ನಿ ಹಾಜರಿದ್ದರು.
2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ 15 ಜನರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಸಿಬಿಐ ತನಿಖೆಗೆ ಸ್ವಾಗತ ಎಂದು ಸಿಸೋಡಿಯಾ ಸೋಮವಾರ ಟ್ವೀಟ್ ಮಾಡಿದ್ದರು.
ಆಗಸ್ಟ್ 19ರಂದು ನಮ್ಮ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಬಿಐ ತಂಡ 14 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ್ದರೂ ಕೂಡಾ ಏನನ್ನೂ ಪತ್ತೆಹಚ್ಚಿಲ್ಲವಾಗಿತ್ತು. ಇದೀಗ ನನ್ನ ಬ್ಯಾಂಕ್ ಲಾಕರ್ ನಲ್ಲಿಯೂ ಏನೂ ದೊರೆಯಲಾರದು ಎಂದು ಸಿಸೋಡಿಯಾ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.
ಸಿಬಿಐ ತನಿಖೆಗೆ ನನ್ನ ಕುಟುಂಬ ವರ್ಗ ಮತ್ತು ನಾನು ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ ಎಂದು ಸಿಸೋಡಿಯಾ ತಿಳಿಸಿದ್ದರು. ಆಗಸ್ಟ್ 19ರಂದು ಸಿಬಿಐ ತಂಡ ಸಿಸೋಡಿಯಾ ನಿವಾಸ ಸೇರಿದಂತೆ 31 ಸ್ಥಳಗಳ ಮೇಲೆ ದಾಳಿ ನಡೆಸಿತ್ತು.