ಹೊಸದಿಲ್ಲಿ: ಹದಿನೇಳರ ಹರೆಯದ ಬಾಲಕನ ಸಾವಿಗೆ ಕಾರಣವಾದ ಮರ್ಸಿಡಿಸ್ ಹಿಟ್ ಆ್ಯಂಡ್ ರನ್ ಕೇಸಿಗೆ ಸಂಬಂಧಿಸಿ ಆರೋಪಿ, ಉದ್ಯಮಿ ಸನ್‌ವೀತ್ ಸಿಂಗ್ ಎಂಬಾತನನ್ನು ದಿಲ್ಲಿ ಪೊಲೀಸರು ಇಂದು ಬುಧವಾರ ಬಂಧಿಸಿದ್ದಾರೆ.
ಮಾರ್ಚ್ 6ರಂದು ಈ ಪ್ರಕರಣ ನಡೆದಾಗ ಆರೋಪಿ ಉದ್ಯಮಿ ಸನ್‌ವೀತ್ ಸಿಂಗ್ ಸ್ವತಃ ಕಾರು ಚಲಾಯಿಸುತ್ತಿದ್ದರು. ರಾತ್ರಿ 11 ಗಂಟೆಯ ಹೊತ್ತಿಗೆ ದಿಲ್ಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದ ಅತುಲ್ ಅರೋರಾ ಎಂಬ 11ನೇ ತರಗತಿಯ ವಿದ್ಯಾರ್ಥಿಗೆ ಸನ್‌ವೀತ್ ಅವರ ಕಾರು ಢಿಕ್ಕಿಯಾಗಿತ್ತು. ಅಪಘಾತ ನಡೆಸಿದ ಬಳಿಕ ಸನ್‌ವೀತ್ ಕಾರು ನಿಲ್ಲಿಸದೆ ಪರಾರಿಯಾಗಿದ್ದರು.
ದಿಲ್ಲಿಯ ರಾಜೋರಿ ಗಾರ್ಡನ್ ಕ್ರೈಮ್ ಬ್ರಾಂಚ್ ಸಿಬಂದಿಗಳು ಇಂದು ಆರೋಪಿ ಉದ್ಯಮಿ ಸನ್‌ವೀತ್ ಅವರನ್ನು, ಅಪಘಾತ ನಡೆಸಿದ ಕಾರು ಸಹಿತ, ವಶಕ್ಕೆ ತೆಗೆದುಕೊಂಡರು. ಅಪಘಾತ ನಡೆಸಿದ್ದ ವೇಳೆ ಸನ್‌ವೀತ್ ಅವರು ಕುಡಿದ ಅಮಲಿನಲ್ಲಿ ಇದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಸನ್‌ವೀತ್ ಅವರು ಅಂದು ತಮ್ಮ ಸ್ನೇಹಿತನೊಂದಿಗೆ ಹೊಟೇಲಿಗೆ ಹೋಗುತ್ತಿದ್ದರು.