Advertisement

ಮೂವರು ಕಾಂಗ್ರೆಸ್ಸಿಗರಿಗೆ ದೆಹಲಿ ಹೈಕೋರ್ಟ್‌ ನೋಟಿಸ್‌

08:44 PM Jul 29, 2022 | Team Udayavani |

ನವದೆಹಲಿ: ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಪುತ್ರಿ ವಿಚಾರದಲ್ಲಿ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್‌ ಮೂವರು ಕಾಂಗ್ರೆಸ್‌ ನಾಯಕರಿಗೆ ನೋಟಿಸ್‌ ಜಾರಿ ಮಾಡಿದೆ.

Advertisement

ಜತೆಗೆ 24 ಗಂಟೆಗಳ ಒಳಗಾಗಿ ಅವರು ಮಾಡಿದ ಟ್ವೀಟ್‌ ಡಿಲೀಟ್‌ ಮಾಡಬೇಕು ಎಂದು ಕಾಂಗ್ರೆಸ್‌ ಮುಖಂಡರಾಗಿರುವ ಜೈರಾಮ್‌ ರಮೇಶ್‌, ಪವನ್‌ ಖೇರಾ ಮತ್ತು ನೆಟ್ಟಾ ಡಿ’ಸೋಜಾ ಅವರಿಗೆ ನ್ಯಾ.ಮಿನಿ ಪುಷ್ಕರನ್‌ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ. ಇದರ ಜತೆಗೆ ಮೂವರು ಮುಖಂಡರಿಗೂ ಆ.18ರಂದು ಖುದ್ದು ಹಾಜರಿರಬೇಕು ಎಂದು ಆದೇಶ ನೀಡಿದೆ.

ಕೇಂದ್ರ ಜವಳಿ ಸಚಿವೆಯ ಪುತ್ರಿ ಝೋಯಿಶ್‌ ಇರಾನಿ ಅವರು ಗೋವಾದಲ್ಲಿ ಬಾರ್‌ ಮತ್ತು ರೆಸ್ಟಾರೆಂಟ್‌ ಮಾಲೀಕತ್ವ ಇದೆ ಎಂಬ ವಿಚಾರಕ್ಕೆ ಕಾಂಗ್ರೆಸ್‌ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಮತ್ತು ಟ್ವೀಟ್‌, ಯು ಟ್ಯೂಬ್‌ ಮತ್ತು ಫೇಸ್‌ಬುಕ್‌ ಮೂಲಕ ಗುರುತರ ಆರೋಪಗಳನ್ನು ಮಾಡಿದ್ದರು. ಅವುಗಳನ್ನೂ ಮುಂದಿನ 24 ಗಂಟೆಗಳಲ್ಲಿ ಡಿಲೀಟ್‌ ಮಾಡಬೇಕು ಎಂದೂ ನ್ಯಾಯಪೀಠ ಆದೇಶ ನೀಡಿದೆ. ಆರೋಪ ಪ್ರಶ್ನೆ ಮಾಡಿ ಸ್ಮತಿ ಇರಾನಿ 2 ಕೋಟಿ ರೂ. ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಅದರ ವಿಚಾರಣೆ ನಡೆಸಿದ ನ್ಯಾಯಪೀಠ “ಮೇಲ್ನೋಟಕ್ಕೆ ಮೂವರು ಮುಖಂಡರು ಅರ್ಜಿದಾರರು ಆರೋಪಿಸಿದಂತೆ ಅನಗತ್ಯ ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಇದರ ಜತೆಗೆ ಟ್ವೀಟ್‌ಗಳು ಮತ್ತು ರಿ- ಟ್ವೀಟ್‌ಗಳಿಂದಾಗಿ ಅರ್ಜಿದಾರರ ಘನತೆ ಮತ್ತು ವರ್ಚಸ್ಸಿಗೆ ಚ್ಯುತಿಯಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

ಖಚಿತಪಡಿಸಿದ ರಮೇಶ್‌:
ಮುಂದಿನ ವಿಚಾರಣೆಗೆ ಹಾಜರಾಗುವ ದಿನಾಂಕದ ಬಗ್ಗೆ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ ಮತ್ತು ಅದನ್ನು ಕಾನೂನಿನ ಅನ್ವಯ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

Advertisement

ಗೋವಾ ಅಬಕಾರಿ ಆಯುಕ್ತರ ವಿಚಾರಣೆ ಶುರು
ಕೇಂದ್ರ ಸಚಿವೆ ಸ್ಮತಿ ಇರಾನಿ ಪುತ್ರಿ ಝೋಯಿಶ್‌ ಇರಾನಿ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ಗೋವಾದ ಅಬಕಾರಿ ಆಯುಕ್ತ ನಾರಾಯಣ ಗಾಡ್‌ ವಿಚಾರಣೆ ಆರಂಭಿಸಿದ್ದಾರೆ. ತಪ್ಪು ಮಾಹಿತಿ ಮತ್ತು ನಕಲಿ ದಾಖಲೆಗಳನ್ನು ನೀಡುವ ಮೂಲಕ ಪರವಾನಗಿ ಪಡೆಯಲಾಗಿತ್ತೇ ಮತ್ತು ಅದನ್ನು ನೀಡುವಲ್ಲಿ ಇಲಾಖೆ ವತಿಯಿಂದ ಏನಾದರೂ ತಪ್ಪಾಗಿತ್ತೇ ಎಂಬ ಅಂಶಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ವಿಚಾರಣೆ ನಡೆದಿತ್ತು.

ಸಾಮಾನ್ಯರೇ ಆಗಲಿ ಅಥವಾ ದೊಡ್ಡ ಹುದ್ದೆಯಲ್ಲಿ ಇರುವವರೇ ಆಗಲಿ, ಆರೋಪ ಮಾಡುವ ಮೊದಲು ತಮ್ಮ ಬಳಿ ಇರುವ ಮಾಹಿತಿ ಖಚಿತಪಡಿಸಿಕೊಳ್ಳಬೇಕು.
-ಕಿರಣ್‌ ರಿಜಿಜು, ಕೇಂದ್ರ ಕಾನೂನು ಸಚಿವ

ಲೋಕಸಭಾ ಕಲಾಪ ಮುಂದೂಡಿಕೆ
ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿಯವರ ರಾಷ್ಟ್ರಪತ್ನಿ ಕುರಿತ ಹೇಳಿಕೆಯ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರು ಲೋಕಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವು ಒಂದು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿದೆ.

ಬೆಳಗ್ಗೆ ಕಲಾಪ ಆರಂಭಗೊಂಡಾಗಿನಿಂದಲೂ ಬಿಜೆಪಿ ಸಂಸದರು, ಅಧೀರ್‌ ಅವರ ಹೇಳಿಕೆ ಕುರಿತಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು ರಾಷ್ಟ್ರಪತಿ ಮುರ್ಮು ಅವರನ್ನು ಖುದ್ದಾಗಿ ಭೇಟಿಯಾಗಿ ಕ್ಷಮೆ ಯಾಚಿಸಬೇಕು. ಅಲ್ಲಿಯವರೆಗೆ ನಾವು ಕಲಾಪ ಮುಂದುವರಿಯಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

ಇದು, ವಿಪಕ್ಷಗಳನ್ನು ಕೆರಳಿಸಿತು. ಆಗ, ಎರಡೂ ಕಡೆಯ ಸಂಸದರ ನಡುವೆ ಮಾತಿನ ಚಕಮಕಿ, ಗದ್ದಲ ನಡೆಯಿತು. ಈ ಸಂದರ್ಭದಲ್ಲಿ ಸಭಾಪತಿ,ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದ್ದರು. ಮಧ್ಯಾಹ್ನ ಕಲಾಪ ಮುಂದುವರಿದಾಗ, ಪುನಃ ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

ಖರ್ಗೆಗೆ ಮಾತನಾಡಲು ಅವಕಾಶ ಸಿಗಲಿಲ್ಲ!
ರಾಜ್ಯಸಭೆಯಲ್ಲೂ ಅಧೀರ್‌ ರಂಜನ್‌ ವಿವಾದ ಪ್ರತಿಧ್ವನಿಸಿತು. ಈ ಸಂದರ್ಭದಲ್ಲಿ ರಾಜ್ಯಸಭೆಯ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸ್ಪಷ್ಟನೆ ನೀಡಲು ಎದ್ದು ನಿಂತಾಗ ಅವರಿಗೆ ಮಾತನಾಡಲು ಅವಕಾಶ ನೀಡಲಾಗಲಿಲ್ಲ. ಅಲ್ಲೂ ಕೂಡ ಪದೇ ಪದೇ ಗದ್ದಲಗಳಾಗಿದ್ದರಿಂದ ಕಲಾಪವನ್ನು ಪದೇ ಪದೇ ಮುಂದೂಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next