ನವದೆಹಲಿ: ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಸಿಬಿಐ(CBI) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ (ಆಗಸ್ಟ್ 05) ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ ಜಸ್ಟೀಸ್ ನೀನಾ ಬನ್ಸಾಲ್ ಕೃಷ್ಣ ಅವರು ಈ ಆದೇಶವನ್ನು ನೀಡಿದ್ದು, ಈ ಸಂದರ್ಭದಲ್ಲಿ ಕೇಜ್ರಿವಾಲ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಜಾಮೀನಿಗಾಗಿ ವಿಚಾರಣಾ ಕೋರ್ಟ್ ಮೆಟ್ಟಿಲೇರುವಂತೆ ತಿಳಿಸಿರುವುದಾಗಿ ವರದಿಯಾಗಿದೆ.
ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು. ಏತನ್ಮಧ್ಯೆ ಸುಪ್ರೀಂಕೋರ್ಟ್ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮೇ10ರಿಂದ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ವಾರಗಳ ನಂತರ ರಜಾಕಾಲ ಪೀಠದ ಜಡ್ಜ್ ನಿಯಾಯ್ ಬಿಂದು ಕೇಜ್ರಿವಾಲ್ ಗೆ ಜಾಮೀನು ಮಂಜೂರು ಮಾಡಿದ್ದು, ಇದಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ಕೇಜ್ರಿವಾಲ್ ಜೈಲುವಾಸ ಮುಂದುವರಿಯುವಂತಾಗಿತ್ತು.
ಈ ಬೆಳವಣಿಗೆ ನಡುವೆಯೇ ಅಬಕಾರಿ ನೀತಿ ಹಗರಣದ ಸಂಬಂಧ ಸಿಬಿಐ ಜೂನ್ 26ರಂದು ತಿಹಾರ್ ಜೈಲ್ ನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠದಲ್ಲಿದ್ದು, ಪ್ರಸ್ತುತ ಕೇಜ್ರಿವಾಲ್ ಜೈಲುವಾಸ ಅನುಭವಿಸುತ್ತಿದ್ದಾರೆ.