ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹಿರಣ್ಯಕಶಿಪು ಮತ್ತು ಪ್ರಹ್ಲಾದನ ಪೌರಾಣಿಕ ಪ್ರಸಂಗಗಳೊಂದಿಗೆ ಇತ್ತೀಚಿನ ಘಟನೆಗಳ ತುಲನೆ ಮಾಡಿದ್ದು, ದೇಶ ಮತ್ತು ಮಕ್ಕಳ ಸೇವೆ ಮಾಡುವವರನ್ನು ಕಂಬಿಯ ಹಿಂದೆ ಹಾಕಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಯಾರನ್ನೂ ಹೆಸರಿಸದೆ, ಹಿರಣ್ಯಕಶಿಪುವಿಗೆ ಹೇಗೆ ಪ್ರಹ್ಲಾದ ದೇವರನ್ನು ಪೂಜಿಸುವುದನ್ನು ತಡೆಯಲು ಸಾಧ್ಯವಾಗಿಲ್ಲವೋ ಹಾಗೆಯೇ ಆಧುನಿಕ ಪ್ರಹ್ಲಾದನನ್ನ(ಮನೀಶ್ ಸಿಸೋಡಿಯಾ) ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಸ್ಪಷ್ಟವಾಗಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಪ್ರಹ್ಲಾದ ಎಂದು ಉಲ್ಲೇಖಿಸಿದ್ದಾರೆ.
“ಹಿರಣ್ಯಕಶಿಪು ತನ್ನನ್ನು ತಾನು ದೇವರೆಂದು ಪರಿಗಣಿಸಲು ಪ್ರಾರಂಭಿಸಿದನು. ಪ್ರಹ್ಲಾದ ದೇವರ ಮಾರ್ಗದಲ್ಲಿ ನಡೆಯದಂತೆ ತಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿ ಅವನ ಮೇಲೆ ದೌರ್ಜನ್ಯ ಎಸಗಿದನು. ಇಂದಿಗೂ ಕೆಲವರು ತಮ್ಮನ್ನು ತಾವು ದೇವರೆಂದು ಪರಿಗಣಿಸಲು ಆರಂಭಿಸಿದ್ದಾರೆ. ದೇಶ ಮತ್ತು ಮಕ್ಕಳ ಸೇವೆ ಮಾಡುತ್ತಿರುವ ಪ್ರಹ್ಲಾದ್ ಅವರನ್ನು ಜೈಲಿಗೆ ಹಾಕಲಾಗಿದೆ. ಆ ಸಮಯದಲ್ಲಿ ಪ್ರಹ್ಲಾದನನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ, ಈಗ ಹಾಗೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
10 ದಿನಗಳ ಕಾಲ ಕಸ್ಟಡಿಗೆ
ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇಡಿ ಶುಕ್ರವಾರ ನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಕೋರಿದೆ. ಇಡಿ ಗುರುವಾರ ಸಂಜೆ ತಿಹಾರ್ ಜೈಲಿನಲ್ಲಿ ಸಿಸೋಡಿಯಾ ಅವರನ್ನು ಬಂಧಿಸಿದ್ದು, 2021-22ರ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.