ಮಣಿಪಾಲ: ನೆಟ್‌ಫ್ಲಿಕ್ಸ್‌ನಲ್ಲಿ ಹೆಸರು ಮಾಡಿದ್ದ ವೆಬ್ ಸರಣಿ “ದಿಲ್ಲಿ ಕ್ರೈಮ್ʼ 48ನೇ ಅಂತಾರಾಷ್ಟ್ರೀಯ ಎಮ್ಮಿ ಅವಾರ್ಡ್ ಪುರಸ್ಕಾರದಲ್ಲಿ “ಬೆಸ್ಟ್ ಡ್ರಾಮಾʼ ವಿಭಾಗಕ್ಕೆ ಆಯ್ಕೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಎಮ್ಮಿ ಪ್ರಶಸ್ತಿ ಪಡೆದ ಮೊದಲ ವೆಬ್ ಸರಣಿ ಎಂಬ ಕೀರ್ತಿಗೆ ಭಾಜನವಾಗಿದೆ.
2012ರಲ್ಲಿ ದಿಲ್ಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಕುರಿತಾಗಿರುವ ಈ ಸರಣಿಯನ್ನು ರಿಚೀ ಮೆಹ್ತಾ ನಿರ್ದೇಶಿಸಿದ್ದಾರೆ. ಇದರಲ್ಲಿ ಶೆಫಾಲಿ ಷಾ ಮುಖ್ಯ ಪಾತ್ರದಲ್ಲಿದ್ದು, ಪೊಲೀಸ್ ಉಪ ಆಯುಕ್ತರ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ವರ್ಷದ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ಭಾರತದಿಂದ ಮೂರು ನಾಮನಿರ್ದೇಶನಗೊಳಿಸಲಾಗಿತ್ತು. ʼದಿಲ್ಲಿ ಕ್ರೈಂʼ ಹೊರತಾಗಿ ಅಮೆಜಾನ್ ಪ್ರೈಮ್ ವೀಡಿಯೋದ ವೆಬ್ ಸರಣಿ “ಮೇಡ್ ಇನ್ ಹೆವನ್ʼ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅರ್ಜುನ್ ಮಾಥುರ್ ಅವರನ್ನು ಎಮ್ಮಿ ಅತ್ಯುತ್ತಮ ನಟ ವಿಭಾಗಕ್ಕೆ ನಾಮನಿರ್ದೇಶನಗೊಳಿಸಲಾಗಿತ್ತು. ಆದರೆ ಈ ಪ್ರಶಸ್ತಿಯನ್ನು ಯುಕೆ ಟಿವಿ ಸರಣಿಯ “ರೆಸ್ಪಾನ್ಸಿಬಲ್ ಚೈಲ್ಡ್ʼ ನ ನಟ ಬಿಲ್ಲಿ ಬ್ಯಾರಟ್ ಅವರಿಗೆ ನೀಡಲಾಗಿದೆ.
ಪ್ರೈಮ್ ವೀಡಿಯೋದ “Four More Shots Pleaseʼ ಅನ್ನು ಭಾರತ ಅತ್ಯುತ್ತಮ ಹಾಸ್ಯ ಸರಣಿ ವಿಭಾಗಕ್ಕೆ ಸೂಚಿಸಿತ್ತು. ಆದರೆ ಈ ಪ್ರಶಸ್ತಿಯನ್ನು ಬ್ರೆಜಿಲ್‌ನ ಹಾಸ್ಯ ಸರಣಿ ನೋ-ಬಾಡಿ ಲುಕಿಂಗ್ (Ningmu Ta Olhando) ಗೆದ್ದುಕೊಂಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಪುರಸ್ಕಾರಗಳನ್ನು ಮೊದಲ ಬಾರಿ ಆನ್‌ಲೈನ್‌ನಲ್ಲಿ ಘೋಷಿಸಲಾಗಿದೆ. ನವೆಂಬರ್ 23 ರಂದು, ನ್ಯೂಯಾರ್ಕ್ ನಗರದ ಹ್ಯಾಮರ್‍ಸ್ಟೈನ್ ಬಾಲ್ ರೂಂನಿಂದ ನೇರ ಪ್ರಸಾರವಾದ ಈ ಪ್ರಶಸ್ತಿಗಳನ್ನು ರಿಚರ್ಡ್ ಕೈಂಡ್ ಆಯೋಜಿಸಿದ್ದರು.
ಟಿವಿ ಮತ್ತು ವೆಬ್ ಶೋ ಮತ್ತು ಕಲಾವಿದರನ್ನು ಗೌರವಿಸುವ ಸಲುವಾಗಿ 1973 ರಿಂದ ಪ್ರತಿ ವರ್ಷ ನವೆಂಬರ್‌ನಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಕಳೆದ ವರ್ಷ ಭಾರತದಿಂದ ಕೇವಲ ಒಂದು ನಾಮನಿರ್ದೇಶನಗೊಂಡಿತ್ತು. Lust Stories ಎಂಬ ಸರಣಿಯ ರಾಧಿಕಾ ಆಪ್ಟೆ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು.