ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಬಳಿಕ ಕಾಂಗ್ರೆಸ್ ನ ದಿಲ್ಲಿ ಮುಖ್ಯಸ್ಥ ಸ್ಥಾನಕ್ಕೆ ಪಿ ಸಿ ಚಾಕೋ ರಾಜೀನಾಮೆ ನೀಡಿದ್ದಾರೆ.
ಮಾಜಿ ಸಂಸದರಾಗಿರುವ ಪಿ ಸಿ ಚಾಕೋ ಅವರು ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥರಾಗಿದ್ದರು. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ದಿಲ್ಲಿಯಲ್ಲಿನ ಕಾಂಗ್ರೆಸ್ ಎರಡು ಬಾರಿಯ ಸೋಲಿಗೆ ಹೊಣೆಯಾಗಿಸಿದ್ದಾರೆ.
ದಿಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸ್ಥಾನವನ್ನು ಗೆಲ್ಲಲೂ ಸಫಲವಾಗಿರಲಿಲ್ಲ. ಅದರಲ್ಲೂ 63 ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.
ಎಎನ್ ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದಿಲ್ಲಿಯಲ್ಲಿ 2013ರಲ್ಲಿ ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗಲೇ ಕಾಂಗ್ರೆಸ್ ನ ಪ್ರಗತಿ ಇಳಿಮುಖವಾಗಿತ್ತು. ಆಮ್ ಆದ್ಮಿ ಪಕ್ಷ ಉಗಮಿಸಿದಾಗ ಕಾಂಗ್ರೆಸ್ ನ ವೋಟ್ ಬ್ಯಾಂಕ್ ಆಪ್ ಕಡೆಗೆ ಹೋಗಿತ್ತು. ಆದರೆ ಆ ವೋಟ್ ಬ್ಯಾಂಕ್ ಅನ್ನು ಹಿಂದೆ ತರಲು ನಾವು ವಿಫಲವಾದೆವು ಎಂದಿದ್ದಾರೆ.
1998ರಿಂದ 2013ರವರೆಗೆ ಶೀಲಾ ದೀಕ್ಷಿತ್ ಅವರು ದಿಲ್ಲಿ ಮುಖ್ಯಮಂತ್ರಿಯಾಗಿದ್ದರು. 2019ರ ಜುಲೈನಲ್ಲಿ ನಿಧನ ಹೊಂದಿದ್ದಾರೆ.
ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 62 ಕ್ಷೇತ್ರಗಳೊಂದಿಗೆ ಭರ್ಜರಿಯಾಗಿ ಬಹುಮತ ಪಡೆದಿದೆ. ಉಳಿದಂತೆ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.