ಹೊಸದಿಲ್ಲಿ/ಸಿಂಗಾಪುರ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಸಿಂಗಾಪುರ ರೂಪಾಂತರಿ ಹೇಳಿಕೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸಿಂಗಾಪುರ ಸರಕಾರ ಭಾರತದ ಹೈಕಮಿಷನರ್ ಅನ್ನು ಕರೆಯಿಸಿ ತೀವ್ರ ಆಕ್ಷೇಪವನ್ನೂ ಸಲ್ಲಿಸಿದೆ. ಅದಕ್ಕೆ ಪೂರಕವಾಗಿ ಹೊಸದಿಲ್ಲಿಯಲ್ಲಿ ಬುಧವಾರ ಹೇಳಿಕೆ ನೀಡಿದ ವಿದೇಶಾಂಗ ಸಚಿವ ಎಸ್.ಜೈಶಂಕರ್ ದಿಲ್ಲಿ ಸಿಎಂ ದೇಶದ ಪರವಾಗಿ ಮಾತನಾಡುತ್ತಿಲ್ಲ. ಭಾರತಕ್ಕೆ ಸಿಂಗಾಪುರದಿಂದ ಆಕ್ಸಿಜನ್ ಸಿಲಿಂಡರ್, ಮೆಡಿಕಲ್ ಆಕ್ಸಿಜನ್ ತಯಾರಿಸುವ ಘಟಕಗಳನ್ನು ಕ್ಷಿಪ್ರವಾಗಿ ನೀಡಿದೆ. ಸೋಂಕಿನ ವಿರುದ್ಧದ ಹೋರಾಟದಲ್ಲಿ 2 ದೇಶಗಳ ನಡುವೆ ಅತ್ಯುತ್ತಮ ಬಾಂಧವ್ಯ ಹೊಂದಿದೆ ಎಂದು ಹೇಳಿದ್ದಾರೆ. “ಸಿಂಗಾಪುರದಲ್ಲಿ ಪತ್ತೆಯಾಗಿರುವ ರೂಪಾಂತರಿ ಸೋಂಕು ಆ ದೇಶದ ಮಕ್ಕಳಲ್ಲಿ ಕಂಡುಬಂದಿದೆ. ಹೀಗಾಗಿ, ಆ ದೇಶದಿಂದ ಭಾರತದಲ್ಲಿಯೂ 3ನೇ ಕಂಡುಬರಬಹುದು. ಹೀಗಾಗಿ, ಆ ದೇಶದಿಂದ ವಿಮಾನಯಾನ ರದ್ದುಗೊಳಿಸಬೇಕು’ ಮಂಗಳವಾರ ದಿಲ್ಲಿ ಸಿಎಂ ಹೇಳಿದ್ದರು. ಅದಕ್ಕೆ ಸಿಂಗಾಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ “ರಾಜ ಕಾರಣಿಗಳು ಮಾತನಾಡುವ ಮುನ್ನ ಮಾಹಿತಿಯ ಸತ್ಯಾಂಶ ಪರಿಶೀಲಿಸಬೇಕು. ಸಿಂಗಾಪೂರ ರೂಪಾಂತರಿ ಸೋಂಕು ಎನ್ನುವುದೇ ಇಲ್ಲ’ ಎಂದು ಟ್ವೀಟ್ ಮಾಡಿದ್ದರು. ಇದಾದ ಬಳಿಕ ದಿಲ್ಲಿ ಸಿಎಂ ನೀಡಿದ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಯಿತು.
ಇದು ಕೇಜ್ರಿವಾಲ್ ಟೂಲ್‌ಕಿಟ್: ಇದೊಂದು ದಿಲ್ಲಿ ಸಿಎಂ ಕೇಜ್ರಿವಾಲ್ ಅವರ “ಟೂಲ್‌ಕಿಟ್’. ಅದರ ಮೂಲಕ ಕೇಜ್ರಿವಾಲ್ ಗೊಂದಲ ಮತ್ತು ಅರಾಜಕತೆ ಉಂಟುಮಾಡಲು ಯತ್ನಿಸುತ್ತಿದ್ದಾರೆ ಎಂದು. ಎಂದು ಬಿಜೆಪಿ ಟೀಕಿಸಿದೆ. ಮುಖ್ಯಮಂತ್ರಿ ದೇಶದ ವರ್ಚಸ್ಸು ಬಲಿಕೊಡುವ ಮೂಲಕ ರಾಜ ಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.
ಸತತ 6ನೇ ದಿನವೂ ಸೋಂಕು ಇಳಿಕೆ: ಮಂಗಳವಾ ರದಿಂದ ಬುಧವಾರದ ಅವಧಿಯಲ್ಲಿ 2,67,334 ಹೊಸ ಸೋಂಕು ಪ್ರಕರಣಗಳು ದೃಢ ಪಟ್ಟಿವೆ. ಇದೇ ಅವಧಿಯಲ್ಲಿ ಗರಿಷ್ಠ ಸಾವಿನ ಸಂಖ್ಯೆ 4,529 ಮಂದಿ ಅಸುನೀಗಿದ್ದಾರೆ. ಸಮಾಧಾನಕರ ಅಂಶವೆಂದರೆ ಚೇತರಿಸಿಕೊಂಡವ ಸಂಖ್ಯೆ 3,89,851 ಆಗಿದೆ.. ದೇಶ ದಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.13.31ಕ್ಕೆ ಇಳಿಕೆ ಯಾಗಿದ್ದು, ಸಕ್ರಿಯ ಸೋಂಕುಗಳ ಸಂಖ್ಯೆ ಕೂಡ 32,26,719ಕ್ಕೆ ತಗ್ಗಿದೆ.
ಉ.ಪ್ರ.: ಸೋಂಕು ಭಾರೀ ಇಳಿಕೆ: ಉತ್ತರ ಪ್ರದೇಶ ದಲ್ಲಿ ಬುಧವಾರ 7,336 ಸೋಂಕು ದೃಢಪಟ್ಟಿದೆ. ಏ.30ರ ಬಳಿಕ ದಾಖಲಾದ ಅತ್ಯಂತ ಕನಿಷ್ಠ ಸಂಖ್ಯೆ ಇದಾಗಿದೆ. ಒಟ್ಟು 282 ಮಂದಿ ಅಸುನೀಗಿದ್ದಾರೆ. 15,02,918 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಚೇತರಿಕೆ ಪ್ರಮಾಣ ಶೇ.91.4 ಆಗಿದೆ.
ಸೋಂಕಿನಿಂದ ಬಿಜೆಪಿ ಸಚಿವ, ಶಾಸಕ ನಿಧನ
ಜೈಪುರ/ಲಕ್ನೋ: ಸೋಂಕು ದೃಢಪಟ್ಟಿದ್ದ ಉತ್ತರ ಪ್ರದೇಶದ ಕಂದಾಯ ಮತ್ತು ಆಹಾರ ನಿಯಂತ್ರಣ ಖಾತೆ ಸಹಾಯಕ ಸಚಿವ ವಿಜಯ ಕಶ್ಯಪ್ (56) ನಿಧನ ಹೊಂದಿದ್ದಾರೆ. ಅವರು ಮುಝಾಫರ್‌ನಗರ ಜಿಲ್ಲೆಯ ಚರ್‌ತ್ವಾಲ್ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸೋಂಕಿನಿಂದ ಕೊನೆಯುಸಿರೆಳೆದ ಉತ್ತರ ಪ್ರದೇಶದ ಮೂರನೇ ಸಚಿವರಾಗಿದ್ದಾರೆ ಕಶ್ಯಪ್. ಕಳೆದ ವರ್ಷ ಸಚಿವರಾದ ಕಮಲ್ ರಾಣಿ ವರುಣ್, ಚೇತನ್ ಚೌಹಾಣ್ ಸೋಂಕಿನಿಂದ ನಿಧನ ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ, ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರು ಕಂಬನಿ ಮಿಡಿದಿದ್ದಾರೆ. ಮತ್ತೂಂದೆಡೆ, ರಾಜಸ್ಥಾನದ ಪ್ರತಾಪ್‌ಗ್ಢ ಜಿಲ್ಲೆಯ ಧರಿಯಾವಾಡ್ ಕ್ಷೇತ್ರದ ಶಾಸಕ, ಬಿಜೆಪಿ ಮುಖಂಡ ಗೌತಮ್ ಲಾಲ್ ಮೀನಾ (56)ಸೋಂಕಿನಿಂದಾಗಿ ನಿಧನ ಹೊಂದಿದ್ದಾರೆ. ಸೋಂಕು ದೃಢಪಟ್ಟಿದ್ದ ಅವರನ್ನು ಉದಯಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜಸ್ಥಾನದಲ್ಲಿ ಸೋಂಕಿನಿಂದಾಗಿ ಇದುವರೆಗೆ ಮೂವರು ಶಾಸಕರು ನಿಧನ ಹೊಂದಿದ್ದಾರೆ.