Advertisement

ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ದೆಹಲಿ ಚಲೋ

04:22 PM Jan 10, 2018 | |

ಕನಕಪುರ: ಕೇಂದ್ರ ಸರ್ಕಾರ ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿರುವಂತೆ ರೈತರ ಸಾಲವನ್ನು ಮನ್ನಾ ಮಾಡಿ ರೈತರಿಗೆ   ಕೊಟ್ಟಿರುವ ಭರವಸೆ ಈಡೇರಿಸಬೇಕು  ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.

Advertisement

ನಗರದ  ಶಂಕರ  ಮಠದಲ್ಲಿ ರೈತರ ದೆಹಲಿ ಚಲೋ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಈ ಹಿಂದೆ ಯುಪಿಎ ಸರ್ಕಾರ ಸ್ವಾಮಿನಾಥನ್‌ ಆಯೋಗವನ್ನು ನೇಮಕ ಮಾಡಿ ಅವರಿಂದ ವರದಿ ಪಡೆದು   ಕೊಟ್ಟಿದ್ದರೂ ರೈತರ  ಸಾಲವನ್ನು ಮನ್ನ ಮಾಡುವುದಿಲ್ಲವೆಂದು ಕೈ ಕಟ್ಟಿ ಕುಳಿತುಕೊಂಡಿತ್ತು.

ಆದರೆ, ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಚುನಾವಣೆಯ ಪ್ರಣಾಳಿಕೆಯಲ್ಲಿ  ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಪೂರ್ಣವಾಗಿ ಮನ್ನಾ ಮಾಡಲಾಗುವುದೆಂದು ಭರವಸೆ  ನೀಡಿದ್ದರು. ಆದರೆ ನರೇಂದ್ರ ಮೋದಿ ಸರ್ಕಾರ ರೈತ ಸಾಲ ಮನ್ನಾ ಮಾಡದೇ ಮೀನಾ ಮೇಷ ಏಣಿಸುತ್ತಿದೆ  ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವನ್ನು ಎಚ್ಚರಿಸಲು  ಫೆ.23ರಂದು ದೇಶಾದ್ಯಂತ  20 ಲಕ್ಷಕ್ಕೂ ಹೆಚ್ಚು  ರೈತರು ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕೇಂದ್ರ ಸರ್ಕಾರ  ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಲಾಗುವುದೆಂದು ತಿಳಿಸಿದರು.

ಕೇಂದ್ರ ಸರ್ಕಾರ ಉದ್ದಿಮೆಗಳ  ಪರವಾಗಿದ್ದು  ಸುಮಾರು 2 ಲಕ್ಷ ಕೋಟಿ ರೂ. ಹಣವನ್ನು ಮನ್ನಾ ಮಾಡಿದೆ. ಆದರೆ  ಶೇ.70ರಷ್ಟು ಸಾಲವನ್ನು ಮನ್ನಾ ಮಾಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಜೊತೆಗೆ 19 ಬಾರಿ ಬೆಲೆ ಏರಿಕೆಯನ್ನು ಮಾಡಿದೆ. ಇದರಿಂದ   ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು.

Advertisement

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ರೈತರ ಸಾಲ ಮನ್ನಾ ಮಾಡಬೇಕಾಗಿತ್ತು. ಆದರೆ  ಕೇವಲ 50 ಸಾವಿರ ರೂ. ಮಾತ್ರ ಮನ್ನಾ ಮಾಡಿ ಕೈ ಚೆಲ್ಲಿ ಕುಳಿತುಕೊಂಡಿದೆ. 4 ವರ್ಷಗಳ ಕಾಲ ಮಳೆಯಿಲ್ಲದೆ ಬರಗಾಲ ಬಂದು ಯಾವ ಬೆಳೆಯನ್ನೂ ಬೆಳೆಯಲಿಲ್ಲ.

ಇದರಿಂದ ಸಾಲವನ್ನು ಮರು ಪಾವತಿ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಆದರಿಂದ ಸಂಪೂರ್ಣವಾಗಿ ಸಾಲ ಮನ್ನಾ ಮಾಡಿ ರೈತರು ಆರ್ಥಿಕವಾಗಿ ಸಬಲರಾಗಲು  ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಮೇಕೆ ದಾಟು ಹೋರಾಟಸಮಿತಿಯ ಅಧ್ಯಕ್ಷ ಬಿ.ನಾಗರಾಜ್‌, ರೈತ ಸಂಘದ ಜಿಲ್ಲಾ ಕಾರ್ಯಾದ್ಯಕ್ಷ ಸಂಪತ್‌ ಕುಮಾರ್‌, ರೈತ ಮುಖಂಡರಾದ ಶಿವಕುಮಾರ, ರಾಮ್‌ಕುಮಾರ್‌, ಮಂಜುನಾಥ್‌, ಕೊತ್ತನೂರು ಜಗನಣ್ಣ, ವಿರೂಪಸಂದ್ರದ ಕಿಟ್ಟಣದ ಸೇರಿದಂತೆ ಅನೇಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next