Advertisement

Delhi Chalo 2 ದಿನ ಸ್ಥಗಿತ; ಖನೌರಿ ಗಡಿಯಲ್ಲಿ ರೈತರು-ಪೊಲೀಸರ ಘರ್ಷಣೆ, ರೈತ ನಿಧನ

12:36 AM Feb 22, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದೊಂದಿಗಿನ ಮಾತುಕತೆ ವಿಫ‌ಲವಾದ ಬೆನ್ನಲ್ಲೇ “ದಿಲ್ಲಿ ಚಲೋ’ ಮುಂದುವರಿಸಿ ರಾಷ್ಟ್ರ ರಾಜಧಾನಿಯತ್ತ ತೆರಳುತ್ತಿದ್ದ ಪ್ರತಿಭಟನನಿರತ ರೈತರು ಬುಧವಾರ ಸಂಜೆಯೇ ತಮ್ಮ ನಡಿಗೆಯನ್ನು ಮೊಟಕುಗೊಳಿಸಿದ್ದಾರೆ. ಖನೌರಿ ಗಡಿ ಬಳಿಯ ಘರ್ಷಣೆಯಲ್ಲಿ ಯುವ ರೈತ ನೊಬ್ಬ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ 2 ದಿನಗಳವರೆಗೆ ಪ್ರತಿಭಟನೆ ಸ್ಥಗಿತಗೊಳಿಸುತ್ತಿರುವು ದಾಗಿ ರೈತ ಮುಖಂಡರು ಘೋಷಿಸಿದ್ದಾರೆ.

Advertisement

ಈ ಸಂಬಂಧಿಸಿದಂತೆ ಕಿಸಾನ್‌ ಮಜದೂರ್‌ ಸಂಘರ್ಷ (ಕೆಎಂಎಸ್‌) ನಾಯಕ ಸರ್ವಾನ್‌ ಸಿಂಗ್‌ ಪಂಧೇರ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಖನೌರಿಯಲ್ಲಿ ನಡೆದ ಘಟನೆ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ. ದಿಲ್ಲಿ ಕಡೆಗಿನ ನಮ್ಮ ಪ್ರತಿಭಟನೆ ಜಾಥಾವನ್ನು 2 ದಿನ ಸ್ಥಗಿತಗೊಳಿಸುತ್ತಿದ್ದೇವೆ. ಚಳವಳಿಯ ಮುಂದಿನ ಭಾಗವೇನು, ಸಂಪೂರ್ಣ ಪರಿಸ್ಥಿತಿ ಏನು ಎಂಬುದರ ಬಗ್ಗೆ ಶುಕ್ರವಾರ ಸಂಜೆ ತಿಳಿಸುತ್ತೇವೆ ಎಂದಿದ್ದಾರೆ.

ಖನೌರಿಯಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಈ ಸಂದರ್ಭದಲ್ಲಿ ಶುಭ ಕರಣ್‌ ಸಿಂಗ್‌ (21) ಎಂಬ ಯುವರೈತ ಸೇರಿ ಮೂವರು ಗಾಯಗೊಂಡಿದ್ದರು. ಅವರನ್ನು ಪಟಿಯಾಲದ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಅಲ್ಲಿ ಶುಭ ಕರಣ್‌ ಮೃತಪಟ್ಟಿದ್ದಾರೆ. ಪೊಲೀಸರ ರಬ್ಬರ್‌ ಗುಂಡಿನ ದಾಳಿಯಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) (ಸಿಧುಪರ್‌) ನಾಯಕ ಕಾಕಾ ಸಿಂಗ್‌ ಕೊಡ್ತಾ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಹಲವಾರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಶುಭ ಕರಣ್‌ ಸಿಂಗ್‌ ಸಾವಿನ ಹಿನ್ನೆಲೆಯಲ್ಲಿಯೇ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿದೆಯಾದರೂ ಈ ಬಗ್ಗೆ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ.ಇದಕ್ಕೂ ಮುನ್ನ ಶಂಭು ಮತ್ತು ಖನೌರಿ ಗಡಿಗಳಲ್ಲಿ ದಿಲ್ಲಿಯತ್ತ ಸಾಗಲು 1,200 ಟ್ರ್ಯಾಕ್ಟರ್‌ಗಳು, 1,400 ಮಂದಿ, 300 ಕಾರುಗಳು ಮತ್ತು 10 ಮಿನಿ ಬಸ್‌ಗಳು ಜಮಾಯಿಸಿದ್ದವು. ಈ ನಿಟ್ಟಿನಲ್ಲಿ ಗಡಿಗಳಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು.

12 ಪೊಲೀಸರಿಗೆ ಗಾಯ: ಹರಿಯಾಣ ಪೊಲೀಸ್‌
160 ರೈತರಿಗೆ ಗಾಯ: ಪಂಜಾಬ್‌ ಸರಕಾರ ವರದಿ
ದತ್ತ ಸಿಂಗ್‌-ಖನೌರಿ ಗಡಿಯಲ್ಲಿ ಪ್ರತಿಭಟನನಿರತ ರೈತರು ಪೊಲೀಸರನ್ನು ಸುತ್ತುವರಿದು ಕಳೆಗಳಿಗೆ ಮೆಣಸಿನಕಾಯಿ ಸುರಿದು ಬೆಂಕಿ ಹಚ್ಚಿ, ಘಾಟು ಎಬ್ಬಿಸಿದ್ದಾರೆ. ಅಲ್ಲದೆ ಪೊಲೀಸರ ಮೇಲೆಯೇ ದೊಣ್ಣೆ ಮತ್ತು ಮಚ್ಚುಗಳನ್ನು ಬಳಸಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ 12 ಮಂದಿ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹರಿಯಾಣ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಪಂಜಾಬ್‌ ಸರಕಾರವು ಹೇಳಿಕೆ ನೀಡಿದ್ದು, ಶಾಂತವಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸುತ್ತಿದ್ದು, ಇದರಿಂದ 160 ರೈತರು ಗಾಯಗೊಂಡಿದ್ದಾರೆ ಎಂದಿದೆ. ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಪಂಜಾಬ್‌ ಮುಖ್ಯ ಕಾರ್ಯದರ್ಶಿ ಅನುರಾಗ್‌ ವರ್ಮಾ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

5ನೇ ಸುತ್ತಿನ ಮಾತುಕತೆಗೆ ಬನ್ನಿ: ಕೇಂದ್ರ ಸರಕಾರ
ಪ್ರತಿಭಟನೆಯ ಬಿಸಿ ಹೆಚ್ಚುತ್ತಿರುವಂತೆಯೇ ರೈತರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಲು ಕೇಂದ್ರ ಸರಕಾರ ನಿಶ್ಚಯಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಅರ್ಜುನ್‌ ಮುಂಡಾ ಅವರು ಪ್ರತಿಭಟನನಿರತ ರೈತ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಎಂಎಸ್‌ಪಿ ಸಹಿತ ಎಲ್ಲ ವಿಚಾರಗಳನ್ನು ಚರ್ಚಿಸಲು ನಾವು ಸಿದ್ದರಿದ್ದೇವೆ. ಮಾತುಕತೆ ಮೂಲಕ ಮಾತ್ರವೇ ಸಮಸ್ಯೆ ಬಗೆಹರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ರೈತ ನಾಯಕರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದು, ಶಾಂತಿ ಕಾಯ್ದುಕೊಳ್ಳುವಂತೆ ಪ್ರತಿಭಟನನಿರತ ರೈತರಿಗೆ ಮನವಿ ಮಾಡುತ್ತಿದ್ದೇನೆ ಎಂದು ಮುಂಡಾ ಹೇಳಿದ್ದಾರೆ. ಈ ಪ್ರಸ್ತಾವದ ಬಗ್ಗೆ ಚಿಂತನೆ ನಡೆಸುವುದಾಗಿ ರೈತ ನಾಯಕ ಸರ್ವಾನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next