ನವದೆಹಲಿ:ದೆಹಲಿಯ ಅಪಾರ್ಟ್ ಮೆಂಟ್ ನಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿ ಶ್ರದ್ದಾ ವಾಕರ್ (26ವರ್ಷ) ಎಂಬಾಕೆಯನ್ನು ಅಫ್ತಾಬ್ ಅಮಿನ್ ಪೂನಾವಾಲ ಬರ್ಬರವಾಗಿ ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೂನಾವಾಲನ ಮಂಪರು ಪರೀಕ್ಷೆಗೆ ದೆಹಲಿ ಕೋರ್ಟ್ ಬುಧವಾರ (ನವೆಂಬರ್ 16) ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಹಿಳೆಯೊಂದಿಗಿರುವ ಫೋಟೋ ಟ್ರೋಲ್; ಕಿಡಿಕಾರಿದ ಶಶಿ ತರೂರ್
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಅಫ್ತಾಬ್ ಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಬೇಕೆಂದು ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಮಂಪರು ಪರೀಕ್ಷೆ ಅನುಮತಿ ನೀಡಿದ್ದು, ಇನ್ನು ಮಂಪರು ಪರೀಕ್ಷೆ ನಡೆಸಲು ಆತನ ಒಪ್ಪಿಗೆಯ ಅಗತ್ಯವಿದೆ. ಮಂಪರು (ನಾರ್ಕೋ) ಪರೀಕ್ಷೆ ನಡೆಸುವ ಮೊದಲು ಪೊಲೀಸರು ಆರೋಪಿಯ ಒಪ್ಪಿಗೆ ಪಡೆಯಬೇಕಾಗಿದೆ. ಆರೋಪಿ ಒಪ್ಪಿಗೆ ನೀಡಿದಲ್ಲಿ ಮಾತ್ರ ಮಂಪರು ಪರೀಕ್ಷೆ ನಡೆಸಬಹುದಾಗಿದೆ ಎಂದು ವರದಿ ವಿವರಿಸಿದೆ.
ಘಟನೆ ನಡೆದ ಸ್ಥಳದಲ್ಲಿ ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಡುಗೆ ಕೋಣೆಯಲ್ಲಿ ಸಂಗ್ರಹಿಸಿದ್ದ ಕೆಲವು ರಕ್ತದ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ. ಈ ಮೂಲಕ ಇದು ಶ್ರದ್ಧಾಳ ದೇಹದ ಭಾಗವೇ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ವರದಿ ತಿಳಿಸಿದೆ.
ದೆಹಲಿ ಪೊಲೀಸರು ಅಫ್ತಾಬ್ ಪೂನಾವಾಲನಿಗೆ ಮಾನಸಿಕ ವಿಶ್ಲೇಷಣಾ ಪರೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಪರೀಕ್ಷೆಯಿಂದಾಗಿ ಪೂನಾವಾಲನ ಮಾನಸಿಕ ಸ್ಥಿತಿಗತಿಯನ್ನು ತಿಳಿಯಬಹುದಾಗಿದೆ. ಪ್ರಾಥಮಿಕ ಹಂತದ ತನಿಖೆ ನಡೆದ ನಂತರ ಮುಂಬರುವ ದಿನಗಳಲ್ಲಿ ಪೂನಾವಾಲಗೆ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಶ್ರದ್ಧಾಳ ತಲೆ ಭಾಗಕ್ಕಾಗಿ ಶೋಧ:
ಅಫ್ತಾಬ್ ಅಮಿನ್ ಪೂನಾವಾಲ ಪ್ರೇಯಸಿ ಶ್ರದ್ಧಾಳನ್ನು ಕೊಂದು ದೇಹವನ್ನು 35 ಭಾಗಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ. ನಂತರ ಒಂದೊಂದೇ ಭಾಗಗಳನ್ನು ಕಾಡಿನ ಪ್ರದೇಶದಲ್ಲಿ ಎಸೆದು ಬರುತ್ತಿದ್ದ. ಆದರೆ ದೆಹಲಿ ಪೊಲೀಸರ ಸಂಶಯದ ಪ್ರಕಾರ, ಆತ ಶ್ರದ್ದಾಳ ಶವವನ್ನು ಕತ್ತರಿಸುವಾಗ ತಲೆಯನ್ನು ಕತ್ತರಿಸದಿರಬಹುದು. ಒಂದು ವೇಳೆ ತಲೆಯ ಭಾಗ ಪತ್ತೆಯಾದರೆ, ಸಂತ್ರಸ್ತೆಯ ಗುರುತನ್ನು ಪತ್ತೆ ಹಚ್ಚಲು ಸಹಾಯಕವಾಗಲಿದೆ ಎಂದು ವರದಿ ತಿಳಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅಫ್ತಾಬ್ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಶ್ರದ್ದಾ ವಾಕರ್ ತಲೆಯನ್ನು ದೀರ್ಘಕಾಲದವರೆಗೆ ಫ್ರಿಡ್ಜ್ ನಲ್ಲಿ ಇಟ್ಟಿದ್ದ. ಅಷ್ಟೇ ಅಲ್ಲ ತನ್ನ ಮತ್ತು ಆಕೆಯ ಸಂಬಂಧದ ನೆನಪಿಗಾಗಿ ತಲೆಯನ್ನು ಆಗಾಗ ವೀಕ್ಷಿಸುತ್ತಿದ್ದನಂತೆ. ನಂತರ ಶವದ ಉಳಿದ ಭಾಗವನ್ನು ಎಸೆಯುವ ಸಂದರ್ಭದಲ್ಲಿ ತಲೆಯನ್ನೂ ಎಸೆದಿರುವುದಾಗಿ ತಿಳಿಸಿದ್ದಾನೆ.