Advertisement
ಡೆಲ್ಲಿಗೆ ಇದು ತವರಿನ ಪಂದ್ಯ. ರಾಯಲ್ಸ್ ವಿರುದ್ಧ ಗೆದ್ದು ಮತ್ತೆ ಪ್ಲೇ ಆಫ್ ರೇಸ್‌ನಲ್ಲಿ 2ನೇ ಸ್ಥಾನಕ್ಕೇರುವ ವಿಶ್ವಾಸ ಸದ್ಯ ತಂಡದಲ್ಲಿದೆ. ಇತ್ತ ಹಲವು ಲೆಕ್ಕಾಚಾರ ಹಾಕಿಕೊಳ್ಳುತ್ತಿರುವ ರಾಜಸ್ಥಾನ್ ಹೇಗಾದರೂ ಡೆಲ್ಲಿಗೆ ಸೋಲುಣಿಸಿ ಪ್ಲೇ ಆಫ್ ಪ್ರವೇಶದ ಸಣ್ಣ ಕನಸೊಂದನ್ನು ಕಾಣುತ್ತಿದೆ.
7 ವರ್ಷಗಳ ಬಳಿಕ ಪ್ಲೇ ಆಫ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಯುವ ಆಟಗಾರರನ್ನೇ ನೆಚ್ಚಿಕೊಂಡ ತಂಡವಾಗಿ ಗುರುತಿಸಿಕೊಂಡಿದೆ. ಸ್ಟಾರ್ ಆಟಗಾರರಿಲ್ಲದೆಯೇ ಡೆಲ್ಲಿ ಪ್ಲೇ ಆಫ್ಗೇರಿದೆ. ಆದರೆ ಈ ಹಂತದಲ್ಲೇ ಡೆಲ್ಲಿಯ ಪ್ರಮುಖ ಅಸ್ತ್ರವಾಗಿದ್ದ ಕಾಗಿಸೊ ರಬಾಡ ಅವರನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ತವರಿಗೆ ವಾಪಸಾಗುವಂತೆ ಹೇಳಿದ್ದರಿಂದ ತಂಡಕ್ಕೆ ಹೊಡೆತ ಬಿದ್ದಿದೆ. ರಬಾಡ 12 ಪಂದ್ಯಗಳಲ್ಲಿ 25 ವಿಕೆಟ್ ಕಿತ್ತು ಅತೀ ಹೆಚ್ಚು ವಿಕೆಟ್ ಕಿತ್ತವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೂಟದಲ್ಲಿ ಉತ್ತಮವಾಗಿ ಆಡುತ್ತ ಬಂದಿದ್ದ ಶಿಖರ ಧವನ್, ರಿಷಬ್ ಪಂತ್ ಚೆನ್ನೈ ವಿರುದ್ಧದ ಹಿಂದಿನ ಪಂದ್ಯದಲ್ಲಿ ಎಡವಿರುವುದು ಇನ್ನೊಂದು ಹಿನ್ನಡೆ. ಆದರೆ ನಾಯಕ ಶ್ರೇಯಸ್ ಅಯ್ಯರ್ ಫಾರ್ಮ್ಗೆ ಮರಳಿರುವುದರಿಂದ ತಂಡಕ್ಕೆ ಸ್ವಲ್ಪ ನಿರಾಳತೆ ದೊರಕಿದೆ. ಮಧ್ಯಮ ಕ್ರಮಾಂಕದಲ್ಲಿ ಕಾಲಿನ್ ಇನ್‌ಗಾÅಮ್, ರುದರ್‌ಫೋರ್ಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದರೆ ಡೆಲ್ಲಿಗೆ ಗೆಲುವು ನಿರೀಕ್ಷಿತ. ಬೌಲಿಂಗ್‌ನಲ್ಲಿ ಆಲ್ ರೌಂಡರ್ ಕ್ರಿಸ್ ಮಾರಿಸ್, ಅಕ್ಷರ್ ಪಟೇಲ್, ಟ್ರೆಂಟ್ ಬೌಲ್ಟ್ , ಜಗದೀಶ್ ಸುಚಿತ್, ಇಶಾಂತ್ ಶರ್ಮ ಸಂಘಟಿತ ದಾಳಿ ನಡೆಸುವ ವಿಶ್ವಾಸದಲ್ಲಿÉದ್ದಾರೆ. ರಾಯಲ್ಸ್‌ಗೆ ಕನ್ನಡಿಗ ಗೋಪಾಲ್ ಬಲ
ನಾಯಕತ್ವದ ಬದಲಾವಣೆಯಿಂದ ಕೊಂಚ ಚೇತರಿಸಿಕೊಂಡಿರುವ ರಾಜಸ್ಥಾನಕ್ಕೆ ಮತ್ತೆ ಆಘಾತ ಎದುರಾಗಿದೆ. ವಿಶ್ವಕಪ್ ತಯಾರಿಗಾಗಿ ಸ್ಟೀವನ್ ಸ್ಮಿತ್ ತವರಿಗೆ ಮರಳಿದ್ದಾರೆ. ತಂಡದ ನಾಯಕತ್ವದ ಜವಾಬ್ದಾರಿ ಮತ್ತೆ ಅಜಿಂಕ್ಯ ರಹಾನೆ ಹೆಗಲೇರಿದೆ. ಈಗಾಗಲೇ ಸ್ಟಾರ್ ಆಟಗಾರರಾದ ಬಟ್ಲರ್, ಸ್ಟೋಕ್ಸ್ , ಜೋಪ್ರ ಆರ್ಚರ್ ನಿರ್ಗಮನದ ಬಳಿಕ ಇದೀಗ ಸ್ಮಿತ್ ತೊರೆದಿರುವುದೂ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂಜು ಸ್ಯಾಮ್ಸನ್, ಲಿವಿಂಗ್‌ಸ್ಟೋನ್, ರಹಾನೆ, ರಿಯಾನ್ ಪರಾಗ್ ಬ್ಯಾಟಿಂಗ್ ಬಲವಾದರೆ, ಕನ್ನಡಿಗ ಶ್ರೇಯಸ್ ಗೋಪಾಲ್ ತಂಡದ ಬೌಲಿಂಗಿಗೆ ಬಲ ತುಂಬಿದ್ದಾರೆ. ಉಳಿದಂತೆ ಉನಾದ್ಕತ್, ವರುಣ್ ಆರೋನ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರೆ ತಂಡಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ಒಟ್ಟಾರೆಯಾಗಿ ಇತ್ತಂಡಗಳಿಗೂ ಸ್ಟಾರ್ ಆಟಗಾರರ ಅಲಭ್ಯತೆ ಕಾಡಲಿದೆ.