ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ, ಹಾರ್ಡ್ ಹಿಟ್ಟಿಂಗ್ ಸ್ಟಂಪರ್ ರಿಷಭ್ ಪಂತ್ ಈ ಐಪಿಎಲ್‌ನಿಂದ ಬೇರ್ಪಟ್ಟಿದ್ದಾರೆ. ಇವರಿಗೆ ಪರ್ಯಾಯ ಆಯ್ಕೆ ಬಹಳ ಕಷ್ಟ. ಈ ಸ್ಥಾನವೀಗ ಬಂಗಾಲದ ಅಭಿಷೇಕ್ ಪೊರೆಲ್ ಅವರದಾಗಿದೆ.
20 ವರ್ಷದ ಅಭಿಷೇಕ್ ಪೊರೆಲ್ ಕೂಡ ಪಂತ್ ಅವರಂತೆ ಎಡಗೈ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿದ್ದಾರೆ. 16 ಪ್ರಥಮ ದರ್ಜೆ ಪಂದ್ಯ, 3 ಲಿಸ್ಟ್ ಎ ಪಂದ್ಯ, 3 ಟಿ20 ಪಂದ್ಯಗಳಿಂದ ಕ್ರಮವಾಗಿ 694, 54 ಹಾಗೂ 22 ರನ್ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಬ್ಯಾಟಿಂಗ್ ಸಾಧನೆ ಗಮನಾರ್ಹ ಮಟ್ಟದಲ್ಲಿರಲಿಲ್ಲ. ಹೀಗಾಗಿ ಇವರ ಸಾಮರ್ಥ್ಯ ಪ್ರದರ್ಶನಕ್ಕೆ ಐಪಿಎಲ್ ಉತ್ತಮ ವೇದಿಕೆಯಾಗಿದೆ.
ರಿಷಭ್ ಪಂತ್ ಗೈರಲ್ಲಿ ಆಸ್ಟ್ರೇಲಿಯದ ಅನುಭವಿ ಕ್ರಿಕೆಟಿಗ, ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ಫಾರ್ಮ್ ಕೂಡ ಇತ್ತೀಚಿನ ದಿನಗಳಲ್ಲಿ ಮಂಕಾಗಿದೆ. ಕಳೆದ ಋತುವಿನಲ್ಲಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದ್ದ ಡೆಲ್ಲಿ 5ನೇ ಸ್ಥಾನಕ್ಕೆ ಸಮಾಧಾನಪಟ್ಟಿತ್ತು. 14 ಪಂದ್ಯಗಳಿಂದ 14 ಅಂಕ ಸಂಪಾದಿಸಿತ್ತು.