ನವದೆಹಲಿ: ಇಬ್ಬರು ಅಪರಿಚಿತ ದುಷ್ಕರ್ಮಿಗಳು ದೆಹಲಿಯ ಮಟಿಯಾಲ ರಸ್ತೆಯಲ್ಲಿರುವ ಕಚೇರಿಗೆ ನುಗ್ಗಿ ಬಿಜೆಪಿ ನಾಯಕ ಸುರೇಂದ್ರ ಮಟಿಯಾಲ ಅವರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ ಮಟಿಯಾಲ ಹಾಗೂ ಅವರ ಸೋದರಳಿಯನ ಜೊತೆ ತಮ್ಮ ಕಚೇರಿಯಲ್ಲಿ ಸಂಜೆ ಸುಮಾರು 7:30 ರ ಹೊತ್ತಿಗೆ ಟಿವಿ ವೀಕ್ಷಿಸುತ್ತಿದ್ದ ವೇಳೆ ಕಚೇರಿ ಒಳಗೆ ಹೆಲ್ಮೆಟ್ ಧರಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಮಟಿಯಾಲ ಅವರ ಮೇಲೆ ಮನ ಬಂದಂತೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಮಟಿಯಾಲಾ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಒಟ್ಟು ಮೂವರು ದಾಳಿಕೋರರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಟಿಯಾಲ ಅವರನ್ನು ಕೊಲ್ಲಲು ಇಬ್ಬರು ಕಚೇರಿಗೆ ಪ್ರವೇಶಿಸಿದರೆ, ಒಬ್ಬರು ಮೋಟಾರ್ ಸೈಕಲ್‌ನೊಂದಿಗೆ ಕಟ್ಟಡದ ಹೊರಗೆ ಕಾಯುತ್ತಿದ್ದರು. ಅಪರಾಧ ಎಸಗಿದ ನಂತರ, ಮೂವರೂ ಒಂದೇ ಮೋಟಾರ್ ಸೈಕಲ್ ಬಳಸಿ ಪ್ರದೇಶದಿಂದ ಪರಾರಿಯಾಗಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು ಅಲ್ಲಿನ ಸಿಸಿ ಕ್ಯಾಮರಾ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ, ಘಟನೆ ಕುರಿತು ಮಟಿಯಾಲಾ ಅವರ ಪುತ್ರನ ಹೇಳಿಕೆಯಂತೆ ನನ್ನ ತಂದೆ ಯಾರೊಂದಿಗೂ ದ್ವೇಷ ಹೊಂದಿಲ್ಲ ಅಲ್ಲದೆ ಅವರ ಮೇಲೆಯೂ ಯಾರಿಗೂ ದ್ವೇಷ ಇರಲಿಲ್ಲ ಆದರೂ ತಂದೆಯ ಹತ್ಯೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಸುರೇಂದ್ರ ಅವರು ಸ್ಥಳೀಯ ಬಿಜೆಪಿ ನಾಯಕರಾಗಿದ್ದು, 2017ರಲ್ಲಿ ಕಾರ್ಪೊರೇಟರ್ ಚುನಾವಣೆಗೂ ಸ್ಪರ್ಧಿಸಿದ್ದರು.
ಇದನ್ನೂ ಓದಿ: Hindutva Tweet: ನಟ ಚೇತನ್ ಕುಮಾರ್ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ