ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತ್ಯಂತ ಭೀಕರ, ಅಮಾನುಷ ಘಟನೆಯೊಂದರಲ್ಲಿ 26 ರ ಹರೆಯದ ಯುವಕನೊಬ್ಬನನ್ನು ಬರ್ಬರವಾಗಿ ಇರಿದು ಹತ್ಯೆಮಾಡಿ, ದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ.
3 ದಿನಗಳಿಂದ ನಾಪತ್ತೆಯಾಗಿದ್ದ ಬಾರ್ ಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಉತ್ತಾರಖಂಡ ಮೂಲದ ವಿಪಿನ್ ಜೋಷಿ ಎಂಬಾತನೇ ಹತ್ಯೆಗೀಡಾದ ಯುವಕ.
ಜೋಷಿಯ ಸಹುದ್ಯೋಗಿ ಮಂಡಲ್ ಎಂಬಾತನೇ ಹತ್ಯೆ ನಡೆಸಿದ್ದು, ಸೋಮವಾರ ರಾತ್ರಿ ಕೆಲಸ ಮುಗಿದ ಬಳಿಕ ಇಬ್ಬರು ಮಂಡಲ್ ಮನೆಯಲ್ಲಿ ಮದ್ಯಪಾನ ಮಾಡಿದ್ದು ಆ ಬಳಿಕ ಹತ್ಯೆ ಮಾಡಲಾಗಿದೆ.
ಇಬ್ಬರು ಸ್ವಲ್ಪ ದೂರದಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎನ್ನುವ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡಲ್ ಮನೆಯಿಂದ ದುರ್ನಾತ ಬರುವ ಕುರಿತು ಸುತ್ತಮುತ್ತಲಿನ ಜನರು ಅನುಮಾನಗೊಂಡು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪರಿಶೀಲನೆ ವೇಳೆ ಫ್ರಿಢ್ಜ್‌ನಲ್ಲಿದ್ದ ಶವ ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಮಂಡಲ್ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.