ಹೊಸದಿಲ್ಲಿ: ಈ ಬಾರಿಯೂ ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಸ್ಥಿತಿಗೆ ತಲುಪಿದೆ.
ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಇದು 740 ಅಂಕ ತಲುಪಿದ್ದು, ಮಂಗಳವಾರ ಮುಂಜಾವ “ಗಂಭೀರ’ ಸ್ಥಿತಿಗೆ ತಲುಪಿರುವುದು ಗೊತ್ತಾಗಿದೆ.
ಕೇಂದ್ರ ಸರಕಾರ ಸ್ವಾಮ್ಯದ ವಾಯು ಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನೆ (ಎಸ್‌ಎಎಫ್ಎಆರ್) ಕೇಂದ್ರ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಮನೆಯ ಒಳಗೆಯೇ ಇರುವಂತೆ ಸೂಚನೆ ನೀಡಿದೆ.
ಮಂಗಳವಾರ ದಿಲ್ಲಿ ವಿ.ವಿ. ವ್ಯಾಪ್ತಿಯಲ್ಲಿ ಪಿಎಂ. 2.5 ಮತ್ತು ಪಿ.ಎಂ. 10 ವಿಷಕಾರಿ ಕಣಗಳ ಪ್ರಮಾಣ 500 ಕ್ಕಿಂತ ಹೆಚ್ಚಾಗಿರುವುದು ಪತ್ತೆಯಾಗಿದೆ. ಇದು ಅತಿ ಗಂಭೀರ ಸ್ಥಿತಿಗಿಂತಲೂ ಹೆಚ್ಚಾಗಿದೆ.
ಆದರೆ ಸೋಮವಾರವಷ್ಟೇ ಸಿಎಂ ಅರವಿಂದ ಕೇಜ್ರಿವಾಲ್ ಅವರು ಈ ಬಾರಿ ದೀಪಾವಳಿ ಸಂದರ್ಭ ವಾಯು ಮಾಲಿನ್ಯ ಪ್ರಮಾಣ ಕಳೆದ ಐದು ವರ್ಷಗಳಲ್ಲೇ ಕಡಿಮೆ ಎಂದು ಹೇಳಿದ್ದರು.
ಪಿಎಂ 2.5 ಅತಿ ವಿಷಕಾರಿ ಮತ್ತು ಅತಿ ಸೂಕ್ಷ್ಮ ಕಣಗಳಾಗಿದ್ದು ಇದು ರಕ್ತದ ಹರಿವಿಗೆ ಸಮಸ್ಯೆಯೊಡ್ಡುತ್ತದೆ. ಹಾಗೆಯೇ ಪಿಎಂ 10 ಮಾನವನ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಸೋಮವಾರ ದಿಲ್ಲಿಯಲ್ಲಿ ವಾಯುಗುಣಮಟ್ಟ ಸೂಚ್ಯಂಕ 345 ಇದ್ದು ಬಳಿಕ ಮಧ್ಯಾಹ್ನ ಹೊತ್ತಿಗೆ 506ಕ್ಕೆ ತಲುಪಿತ್ತು.
ವಾಯುಗುಣಮಟ್ಟ ತೀವ್ರವಾಗಿ ಕುಸಿಯುವುದು ಇತ್ತೀಚಿನ ವರ್ಷಗಳಲ್ಲಿ ಆತಂಕ ಹುಟ್ಟಿಸಿದೆ.