ನವದೆಹಲಿ: ಎರಡು ವರ್ಷಗಳವರೆಗೆ ನಿಷ್ಕ್ರಿಯವಾಗಿರುವ ಖಾತೆಗಳನ್ನು ಅಳಿಸಿ ಹಾಕುವುದಾಗಿ 2020ರಲ್ಲೊಮ್ಮೆ ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿತ್ತು. ಅಂತಹದ್ದೇ ಎಚ್ಚರಿಕೆಯನ್ನು ಈಗ ಮತ್ತೆ ನೀಡಿದೆ. 2 ವರ್ಷದವರೆಗೆ ನಿಷ್ಕ್ರಿಯವಾಗಿರುವ ಖಾತೆಗಳನ್ನು ಈ ವರ್ಷಾಂತ್ಯದಲ್ಲಿ ಅಳಿಸಿ ಹಾಕಲಾಗುವುದು ಎಂದು ತಿಳಿಸಿದೆ. ಜಿಮೇಲ್, ಜಿಡ್ರೈವ್, ಜೀಮೀಟ್, ಜಿಫೋಟೋಸ್, ಕ್ಯಾಲೆಂಡರ್, ಯೂಟ್ಯೂಬ್ ಖಾತೆಗಳು ನಿಷ್ಕ್ರಿಯವಾಗಿದ್ದರೆ ಅವು ಅಳಿಸಲ್ಪಡುತ್ತವೆ. ಹಾಗಾಗಿ ಬಳಕೆದಾರರು ಖಾತೆಯನ್ನು ಉಳಿಸಿಕೊಳ್ಳಬೇಕಿದ್ದರೆ. ಅದನ್ನು ಆಗಾಗ ತೆರೆಯುತ್ತಿರುವುದು ಒಳಿತು!
ಅಳಿಸಲು ಕಾರಣವೇನು?: ನಿಷ್ಕ್ರಿಯ ಖಾತೆಗಳು ದುರ್ಬಳಕೆಯಾಗುವ ಸಾಧ್ಯತೆಯಿರುವುದರಿಂದ ಗೂಗಲ್ ಇಂತಹದ್ದೊಂದು ತೀರ್ಮಾನ ತೆಗೆದುಕೊಂಡಿದೆ. ಪ್ರಸ್ತುತ ಸಕ್ರಿಯವಾಗಿರುವ ಗೂಗಲ್ ಖಾತೆಗಳಿಗಿಂತ ಹತ್ತುಪಟ್ಟು ಅಥವಾ ತುಸು ಕಡಿಮೆ ಖಾತೆಗಳು ನಿಷ್ಕ್ರಿಯವಾಗಿವೆ! ಇವನ್ನು ಹಾಗೆಯೇ ಬಿಟ್ಟರೆ ಕಾಲಕ್ರಮೇಣ ಇಂತಹ ಖಾತೆಗಳಿಂದ ಸ್ಪ್ಯಾಮ್ ಸಂದೇಶಗಳು ಹೋಗಬಹುದು. ಯಾರ್ಯಾರೋ ಏನೇನೋ ಕಾರಣಗಳಿಗೆ ದುರ್ಬಳಕೆ ಮಾಡಬಹುದು, ಒಟ್ಟಾರೆ ಹಾನಿಕಾರಕ ಕೆಲಸಗಳಿಗೆ ಬಳಕೆಯಾಗಬಹುದು. ಇದಕ್ಕೆ ಕಾರಣ ಎರಡು ಹಂತದ ವೆರಿಫಿಕೇಶನ್ಗೆ ಈ ಖಾತೆಗಳು ಒಳಗಾಗಿರುವುದಿಲ್ಲ ಎಂದು ಗೂಗಲ್ ತಿಳಿಸಿದೆ.