ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಜಮೀನುಗಳ ಮಂಜೂರಾತಿ ನಿಯಮ, ನಿಬಂಧನೆಗಳ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಆಂಧ್ರಪ್ರದೇಶದ ಕಂದಾಯ ಸಚಿವರ ನೇತೃತ್ವದ ನಿಯೋಗ ಮಂಗಳವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ಸಚಿವ ಅಶೋಕ್ ಅವರು, ರಾಜ್ಯ ಕಂದಾಯ ಇಲಾಖೆ ತೆಗೆದುಕೊಂಡ ಮಹತ್ವದ ತೀರ್ಮಾನಗಳಾದ ಪಿಂಚಣಿ ವ್ಯವಸ್ಥೆ, ಭೂ ಪರಿವರ್ತನೆ ಸಮಯಾವಧಿ ಇಳಿಕೆ, ಕಾಫಿ, ಶುಂಠಿ ಬೆಳೆಗಾರರಿಗೆ ಜಮೀನನ್ನು 30 ವರ್ಷದ ಅವಧಿಗೆ ಲೀಸ್ ನೀಡುವುದು, ಕಂದಾಯ ದಾಖಲೆಗಳನ್ನು ಉಚಿತವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವುದು ಮುಂತಾದವುಗಳ ಕುರಿತು ಮಾಹಿತಿ ನೀಡಿದರು.
ಆಂಧ್ರಪ್ರದೇಶದ ಕಂದಾಯ ಸಚಿವ ಧರ್ಮನಾ ಪ್ರಸಾದ್ ರಾವ್, ನಗರಾಭಿವೃದ್ಧಿ ಮತ್ತು ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸಚಿವ ಡಾ. ಆದಿಮುಲುಪು ಸುರೇಶ್, ಸಮಾಜ ಕಲ್ಯಾಣ ಖಾತೆ ಸಚಿವ ಮುರುಗ ನಾಗಾರ್ಜುನ, ಶಾಸಕಿ ಎಲ್.ಪದ್ಮಾವತಿ ಹಾಗೂ ಉನ್ನತ ಅಧಿಕಾರಿಗಳು ನಿಯೋಗದಲ್ಲಿದ್ದರು.