Advertisement

ಸುಳ್ಯ- ಅಜ್ಜಾವರ ರಸ್ತೆ ದುರಸ್ತಿಗೆ ಮೀನ-ಮೇಷ

10:03 AM Sep 06, 2018 | Team Udayavani |

ಜಾಲ್ಸೂರು: ಸುಳ್ಯ – ಮಂಡೆಕೋಲು ಸಂಪರ್ಕ ಮಾರ್ಗವಾದ ಅಜ್ಜಾವರ ರಸ್ತೆ ಸಂಪೂರ್ಣ ಹಾನಿಗೀಡಾಗಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಪ್ರಯಾಣಿಕರು ಅಂಗೈಯಲ್ಲಿ ಜೀವ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 6.5 ಕಿ.ಮೀ. ಉದ್ದವಿರುವ ಅಜ್ಜಾವರ ರಸ್ತೆ ನಿರ್ಮಾಣವಾಗಿ ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ಅತಿಯಾಗಿ ಮಳೆ ಬೀಳುವ ಪ್ರದೇಶವಾದ್ದರಿಂದ ಹಾಗೂ ಈ ಬಾರಿ ಅತಿವೃಷ್ಟಿಯೂ ಕಾಡಿದ್ದರಿಂದ ರಸ್ತೆಯುದ್ದಕ್ಕೂ ದೊಡ್ಡ ಗುಂಡಿಗಳು ನಿರ್ಮಾಣವಾಗಿರುವುದನ್ನು ಕಾಣಬಹುದು. ಸರಿಯಾದ ನಿರ್ವಹಣೆಯ ಕೊರತೆಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Advertisement

ದುರಸ್ತಿಗೆ ಇಲ್ಲ ಆದ್ಯತೆ
ರಸ್ತೆಗಳು ಜನರ ಸುಖ ಪ್ರಯಾಣಕ್ಕೆ ಅಡ್ಡಿಯಾಗುತ್ತಿದ್ದರೂ ಅಧಿಕಾರಿಗಳು ದುರಸ್ತಿಗೆ ಹಿಂದೆ-ಮುಂದೆ ನೋಡುತ್ತಿದ್ದಾರೆ. ಐದು ವರುಷಗಳಿಂದ ಈ ರಸ್ತೆ ತೇಪೆಯನ್ನೂ ಕಂಡಿಲ್ಲ. ಜಿ.ಪಂ. ವತಿಯಿಂದ ನಿರ್ಮಾಣಗೊಂಡರೂ ನಿರ್ವಹಣೆ ಟೆಂಡರನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವಹಿಸಲಾಗಿದೆ. ಸಿಆರ್‌ಎಫ್ನಿಂದ ಮಂಜೂರಾಗಿ ತಾಂತ್ರಿಕ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಈ ಪ್ರಕ್ರಿಯೆಯಿಂದ ದುರಸ್ತಿ ವಿಳಂಬವಾಗಿದೆ ಎನ್ನುತ್ತಾರೆ ಸಹಾಯಕ ಎಂಜಿನಿಯರ್‌ ಶ್ರೀನಾಥ್‌.

ದುರಸ್ತಿ ವಿಳಂಬಕ್ಕೆ ಆಕ್ರೋಶ
ರಸ್ತೆಗಳು ಶಿಥಿಲಗೊಂಡು ವಾಹನ ಸಂಚಾರಕ್ಕೆ ಹಲವು ವರ್ಷಗಳಿಂದ ಅಡ್ಡಿಯಾಗುತ್ತಿದ್ದರೂ ದುರಸ್ತಿ ಕಾರ್ಯ ನಡೆಸದಿರುವ ಕುರಿತು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟಿಸುವ ಮೂಲಕ ನಿರ್ವಹಣೆಯ ವಿಳಂಬಕ್ಕೆ ಆಕ್ರೋಶ ಹೊರಹಾಕಿದ್ದಾರೆ. ತುರ್ತು ಸ್ಥಿತಿಯಲ್ಲಿ ನಗರಕ್ಕೆ ಸಂಚರಿಸಲು ಆಟೋ ಚಾಲಕರೂ ಒಪ್ಪುತ್ತಿಲ್ಲ, ಬೇರೆ ವಾಹನಗಳೂ ಬರುತ್ತಿಲ್ಲ. ಜೀವನ ನಿರ್ವಹಣೆಗೂ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಬಸ್ಸುಗಳ ಓಡಾಟವೂ ವಿರಳ. ಹಾನಿಯಾದ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದಕ್ಕಿಂತ ರಿಪೇರಿಗೆ ಅಲೆಯುವುದೇ ಜಾಸ್ತಿ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತ್ವರಿತವಾಗಿ ಈ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಶೀಘ್ರ ದುರಸ್ತಿ
ದುರಸ್ತಿ ಕಾರ್ಯ ಟೆಂಡರ್‌ ಸಿ.ಆರ್‌. ಎಫ್.ನಲ್ಲಿ ಮಂಜೂರಾಗಿದ್ದು ವಿಳಂಬಕ್ಕೆ ಕಾರಣ. ಇದರ ಬಗ್ಗೆ ಜಿ.ಪಂ.ನಿಂದ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ. ಶೀಘ್ರ ದುರಸ್ತಿಗೆ ಗಮನ ಹರಿಸಲಾಗುವುದು.
– ಮಣಿಕಂಠ,
ಜೆಇ, ಪಂಚಾಯತ್‌ ರಾಜ್‌ ಇಲಾಖೆ 

ಮಳೆಗಾಲ ಕಳೆಯಲಿ
ಆರು ಕೋಟಿ ರೂ. ಟೆಂಡರ್‌ ಮಂಜೂರಾಗಿದೆ. ಮಳೆಗಾಲ ಕಳೆದ ಕೂಡಲೇ ದುರಸ್ತಿ ಕಾರ್ಯ ಮಾಡಿಸಲಾಗುವುದು.
– ಅಂಗಾರ
ಶಾಸಕರು ಸುಳ್ಯ

Advertisement

ಹೇಳಿ ಸಾಕಾಗಿದೆ
ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ. ಐದು ವರ್ಷಗಳಿಂದ ರಸ್ತೆ ದುರಸ್ತಿ ನಡೆದಿಲ್ಲ. ಆದಷ್ಟು ಬೇಗ ಮಾಡಿಕೊಡಬೇಕು. ಇಲ್ಲವಾದಲ್ಲಿ ವಾಹನ ಸಂಚಾರಕ್ಕೆ ಬಹಳ ಕಷ್ಟವಾಗುತ್ತದೆ.  
– ಮೊಹಮ್ಮದ್‌
 ಸ್ಥಳೀಯ ನಿವಾಸಿ

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next