Advertisement

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

11:38 PM Oct 24, 2021 | Team Udayavani |

ಬೆಂಗಳೂರು: ಕನ್ನಡ ಭಾಷೆ ಕಲಿಕೆ ಹಾಗೂ ಕನ್ನಡ ಮಾಧ್ಯಮದಲ್ಲೇ ಅಧ್ಯಯನ, ಹೀಗೆ ಕನ್ನಡದ ಕಲಿಕೆ, ಬೋಧನೆಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಾನ್ಯತೆ, ಪ್ರಾಮುಖ್ಯ ಸಿಗುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲೇ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ ಪೂರೈಸಿದವರಿಗೆ ಉದ್ಯೋಗ ದೊರಕಿಸುವ ಕೊಡುವ ನಿಟ್ಟಿನಲ್ಲೂ ರಾಜ್ಯಸರಕಾರ ಮುಂದಾಗಬೇಕು.

Advertisement

ರಾಜ್ಯ ಪಠ್ಯಕ್ರಮದ ಬಹುತೇಕ ಶಾಲೆಗಳಲ್ಲಿ (ಖಾಸಗಿ ಶಾಲೆಗಳು ಹೊರತುಪಡಿಸಿ) ಇಂದಿಗೂ ಕನ್ನಡ ಮಾಧ್ಯಮದಲ್ಲಿಯೇ ಕಲಿಕೆ, ಬೋಧನೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಇದರ ಜತೆಗೆ ಕೆಲವು ಕಡೆ(ಕರ್ನಾಟಕ ಪಬ್ಲಿಕ್‌ ಶಾಲೆ)ಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಆರಂಭಿಸಿದ್ದರೂ ಕನ್ನಡಕ್ಕೂ ಆದ್ಯತೆ ನೀಡಲಾಗಿದೆ. ಹಾಗೆಯೇ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ರಾಜ್ಯಪಠ್ಯಕ್ರಮದ ಖಾಸಗಿ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ಇದು ಪ್ರಾಥಮಿಕ, ಪ್ರೌಢ ಹಂತಕ್ಕೆ ಸೀಮಿತವಾದರೆ, ಪದವಿ, ವೃತ್ತಿಪರ ಕೋರ್ಸ್‌ಗಳ ಕಲಿಕೆಯಲ್ಲೂ ಕನ್ನಡಕ್ಕೆ ಇತ್ತೀಚಿನ ದಿನಗಳಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನದ ಭಾಗವಾಗಿ ಪದವಿಯಲ್ಲಿ 2 ವರ್ಷ ಕನ್ನಡವನ್ನು ಒಂದು ವಿಷಯವಾಗಿ ಅಧ್ಯಯನ ಮಾಡುವುದು ಕಡ್ಡಾಯಗೊಳಿಸಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ತನ್ನ ಅಧೀನದ 4 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಈ ವರ್ಷದಿಂದಲೇ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಪದವಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಡಿಪ್ಲೊಮಾ, ಎಂಜಿನಿಯರಿಂಗ್‌, ಕೃಷಿ ವಿಜ್ಞಾನ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲೂ ವಿದ್ಯಾರ್ಥಿಗಳಿಗೆ ಒಂದೆರೆಡು ಸೆಮಿಸ್ಟರ್‌ನಲ್ಲಿ ಕನ್ನಡವನ್ನು ಕಲಿಸುವ ಪ್ರಕ್ರಿಯೆಯೂ ಈಗಾಗಲೇ ಆರಂಭವಾಗಿದೆ.

ಉದ್ಯೋಗ ಸಿಗುವಂತಾಗಬೇಕು
ಪೂರ್ಣ ಪ್ರಮಾಣದಲ್ಲಿ ಕನ್ನಡ ಮಾಧ್ಯಮದಲ್ಲೇ ಪದವಿ ಪೂರೈಸಿ, ಉನ್ನತ ಅಧ್ಯಯನವೂ ನಡೆಸಿರುವ ಅಭ್ಯರ್ಥಿಗಳು ಉದ್ಯೋಗ ಪಡೆದುಕೊಳ್ಳುವುದು ಹೇಗೆ ಎಂಬ ಆತಂಕ ಇಂದಿಗೂ ಇದೆ. ಸರಕಾರವೇ ಇದಕ್ಕೆ ಪರಿಹಾರ ಸೂಚಿಸಬೇಕು. ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ವಿದ್ಯಾರ್ಥಿಗಳು ಅವರ ಸಾಮರ್ಥ್ಯದ ಮೇಲೆ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳೊಂದಿಗೆ ಔದ್ಯೋಗಿಕ ರಂಗ ಪ್ರವೇಶದ ಸಂದರ್ಭದ ಪ್ರಬಲ ಸ್ಪರ್ಧೆ ನೀಡಬಲ್ಲರು. ಆದರೆ, ಸರಕಾರದಿಂದ ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಅಸ್ಮಿತೆ ಉಳಿಸುವ ಭಾಗವಾಗಿ ಕನ್ನಡ ಮಾಧ್ಯಮದ ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗಾವಕಾಶ ಒದಗಿಸುವ ಕಾರ್ಯ ಆಗಬೇಕು. ಕನ್ನಡದಲ್ಲಿಯೇ ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗೆ ಕರ್ನಾಟಕದಲ್ಲೇ ಉತ್ತಮ ಉದ್ಯೋಗ ದೊರೆಯುವಂತಾಗಬೇಕು. ಇದಕ್ಕಾಗಿ ಐಟಿ-ಬಿಟಿ, ಕೈಗಾರಿಕೆ  ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಮಾಧ್ಯಮದಲ್ಲಿ  ಪದವಿ ಪಡೆದ ಪದವೀಧರರಿಗೆ ಆದ್ಯತೆಯಂತೆ ಉದ್ಯೋಗ ನೀಡಲು ಕಾನೂನಿನ ತಿದ್ದುಪಡಿಯೂ ತರಬೇಕು ಹಾಗೂ ಇದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು.

ಉದ್ಯೋಗಾವಕಾಶ ಹೆಚ್ಚಿಸಬೇಕು
ಯಾವುದೇ ಪದವಿ ಅಥವಾ ವೃತ್ತಿಪರ ಕೋರ್ಸ್‌ ಗಳಲ್ಲಿ ಕನ್ನಡ ಮಾಧ್ಯಮದ ಬೋಧನೆ ಆರಂಭವಾಗಿದೆ ಎಂದಾಕ್ಷಣವೇ ವಿದ್ಯಾರ್ಥಿಗಳು ಸೇರುವುದಿಲ್ಲ. ಪಾಲಕ, ಪೋಷಕರು ಕೂಡ ಸುಲಭದಲ್ಲಿ ಸೇರಿಸಲು ಒಪ್ಪುವುದಿಲ್ಲ. ಕೋರ್ಸ್‌ ಪೂರ್ಣವಾದ ಅನಂತರ ಉದ್ಯೋಗಾವಕಾಶ ಸಿಗುವುದೇ ಎಂಬುದನ್ನು ನೋಡುತ್ತಾರೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದವರಿಗೆ ಸರಕಾರವೇ ಆದ್ಯತೆಯಂತೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯ ಈಗಿಂದಲೇ ಆರಂಭಿಸಬೇಕು. ಇಲ್ಲವಾದರೆ, ಕನ್ನಡ ಮಾಧ್ಯಮಕ್ಕೆ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ವಿಭಾಗವೇ ಮುಚ್ಚಬಹುದಾದ ಸನ್ನಿವೇಶವೂ ಎದುರಾಗಬಹುದು. ಹೀಗಾಗಿ ಉದ್ಯೋಗಾವಕಾಶದ ಬಗ್ಗೆ ಸ್ಪಷ್ಟತೆ ಆರಂಭದಲ್ಲೇ ನೀಡಬೇಕು ಎಂದು ವಿಶ್ರಾಂತ ಕುಲಪತಿಯೊಬ್ಬರು ಮಾಹಿತಿ ನೀಡಿದರು.

Advertisement

ಜರ್ಮನಿ, ರಷ್ಯಾ, ಜಪಾನ್‌ ಸೇರಿದಂತೆ ಹಲವು  ದೇಶಗಳಲ್ಲಿ ಅವರ ಭಾಷೆಯಲ್ಲಿ ಶಿಕ್ಷಣ ಪಡೆದವರು ಹೇಗೆ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೋ ಅದೇ ಮಾದರಿಯಲ್ಲಿ ಇಲ್ಲಿಯೂ ಕನ್ನಡದಲ್ಲಿ ಪದವಿ ಪಡೆದವರಿಗೆ ಉದ್ಯೋಗ ಪಡೆಯಲು ಅನುಕೂಲವಾಗುವ ವಾತಾವರಣ ನಿರ್ಮಾಣ ಮಾಡಲಿದ್ದೇವೆ. ವಿಶೇಷ ಎಂಬಂತೆ, ಇಂತಹವರಿಗೆ ಇಂಗ್ಲಿಷ್‌ ಕಲಿಸುವುದಕ್ಕೂ ಒತ್ತು ನೀಡುತ್ತೇವೆ.
-ಡಾ| ಸಿ.ಎನ್‌.ಅಶ್ವತ್ಥನಾರಾಯಣ,
ಉನ್ನತ ಶಿಕ್ಷಣ ಸಚಿವ 

ಪದವಿಯಲ್ಲ ಕನ್ನಡ ಕಲಿಕೆ ಕಡ್ಡಾಯವಾಗಿ ಆಗಬೇಕು. ಮಾತೃಭಾಷೆ ಚೆನ್ನಾಗಿ ಕಲಿತಾಗ ಮಾತ್ರ ಬೇರೆ ಭಾಷೆ ಕಲಿಯಲು, ವಿಷಯ ಅರ್ಥೈಸಿಕೊಳ್ಳಲು ಸಾಧ್ಯವಿದೆ. ಭಾಷಾ ಕೌಶಲ ಚೆನ್ನಾಗಿದ್ದರೆ ಉದ್ಯೋಗ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಪದವಿ ಅಥವಾ ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಮಾತ್ರಕ್ಕೆ ಉದ್ಯೋಗ ಸಿಗುವುದಿಲ್ಲ ಎಂಬ ತಪ್ಪು ಕಲ್ಪನೆ ಇರಬಾರದು.
-ಪ್ರೊ| ಕೆ.ಆರ್‌.ವೇಣುಗೋಪಾಲ್‌, ಬೆಂಗಳೂರು ವಿಶ್ವವಿದ್ಯಾನಿಲಯ ಕುಲಪತಿ

-ರಾಜು ಖಾರ್ವಿ ಕೊಡೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next