Advertisement

ಕಾಯಕ-ದಾಸೋಹ ಸಂಸ್ಕೃತಿಯ ವಾಖ್ಯಾನ,ಎಮ್ಮೆ ಮೇಯಿಸುತಿದ್ದ ದಿನಗಳ ಮೆಲುಕು

09:55 AM Nov 24, 2017 | |

ವಿಧಾನಸಭೆ: ಬಸವಣ್ಣನ ವಚನ, ಕಾಯಕ-ದಾಸೋಹ ಸಂಸ್ಕೃತಿಯ ವ್ಯಾಖ್ಯಾನ, ಎಮ್ಮೆ ಮೇಯಿಸುತ್ತಿದ್ದ ದಿನಗಳ ಮೆಲುಕುಗಳ ಮೂಲಕ ಸಿಎಂ ಸಿದ್ದರಾಮಯ್ಯ ಗುರುವಾರ ಸದನದ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿದರು.

Advertisement

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ನಡೆದ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ತಮ್ಮದೇ ಧಾಟಿಯಲ್ಲಿ ಪ್ರತಿಪಕ್ಷ ಸದಸ್ಯರನ್ನು ಕಾಲೆಳೆದಿದ್ದು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಗಿತ್ತು. “ನಾನು ಬಸವಣ್ಣನವರ ಕಾಯಕ-ದಾಸೋಹ ಸಂಸ್ಕೃತಿ ಒಪ್ಪುವವನು. ಕಾಯಕ ಎಂದರೆ ಸಂಪತ್ತಿನ ಉತ್ಪಾದನೆ, ದಾಸೋಹ ಎಂದರೆ ಸಂಪತ್ತಿನ ಹಂಚಿಕೆ’ ಎಂದ ಮುಖ್ಯಮಂತ್ರಿ, ಬಿಜೆಪಿಯ ಉಮೇಶ್‌ ಕತ್ತಿ ಕುರಿತು, “ಏನಪ್ಪಾ ಕತ್ತಿ ಗೊತ್ತಾ ನಿನಗೆ ಇದು’ ಎಂದು ಕಿಚಾಯಿಸಿದರು.

ಬಸವಣ್ಣನನ್ನು ನೀನು ಯಾರ ಮಗ ಎಂದು ಕೇಳಿದಾಗ ಮಾದಾರ ಚೆನ್ನಯ್ಯನ ಮಗ ಎಂದು ಹೇಳಿದ್ದರು. ಅನುಭವ ಮಂಟಪದಲ್ಲಿ ಅಲ್ಲಮ ಪ್ರಭು ಅವರನ್ನು ನೇಮಿಸಿದ್ದರು. ಮಹಿಳೆಯರಿಗೂ ಸಮಾನತೆ ಕಲ್ಪಿಸಿದ್ದರು ಎಂದು ಮುಖ್ಯಮಂತ್ರಿ ಹೇಳಿದಾಗ 
ಮಧ್ಯಪ್ರವೇಶಿಸಿದ ಸಚಿವ ಈಶ್ವರ ಖಂಡ್ರೆ, ಆಯ್ದಕ್ಕಿ ಲಕ್ಕಮ್ಮ ಅವರೂ ಇದ್ದರು ಎಂದರು. ನೀನು ವೀರಶೈವ ಮಹಾಸಭಾ ಕಾರ್ಯದರ್ಶಿಯಾಗಿದ್ದಕ್ಕೂ ಸಾರ್ಥಕ ಆಯ್ತು ಬಿಡು ಎಂದು ಸಿದ್ದರಾಮಯ್ಯ ಹೇಳಿದರು. 

ಕತ್ತಿ ಕಾಲೆಳೆದ ಸಿಎಂ: ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ, ಕಾಯಕ ಸಂಸ್ಕೃತಿಯಿಂದ ಸಂಪತ್ತು ಉತ್ಪಾದನೆ ಮಾಡಿ ದಾಸೋಹ ಸಂಸ್ಕೃತಿಯಡಿ ಎಲ್ಲರಿಗೂ ಹಂಚಿಕೆ ಮಾಡಿ ತಿನ್ನಬೇಕು. ಆದರೆ, ಇದ್ಯಾವುದೂ ಮಾಡದೆ ದಲಿತರ ಮನೆಗೆ ತಿಂಡಿ
ತಿನ್ನಲು ಹೋಗ್ತಿಯಲ್ಲ ಎಂದು ಮತ್ತೆ ಉಮೇಶ್‌ಕತ್ತಿ ಅವರ ಕಾಲೆಳೆದರು. ಉಳ್ಳವರು ಶಿವಾಲಯ ಕಟ್ಟುವರು ವಚನ ಹೇಳಿದ
ಸಿದ್ದರಾಮಯ್ಯ, “ನಾನು ಬಸವಣ್ಣನ ಅನುಯಾಯಿ. ಕಾಯಕವೇ ಕೈಲಾಸದ ಪ್ರತಿಪಾದಕ. ನನ್ನನ್ನು ಯಾರೂ ಪ್ರವಚನಕ್ಕೆ ಕರೆಯಲ್ಲ, ನೀವೂ ಕೂಡ’ ಎಂದೂ ಎಂ.ಬಿ.ಪಾಟೀಲ್‌, ವಿನಯ್‌ ಕುಲಕರ್ಣಿಯತ್ತ ನೋಡಿ, ಈ ವಿಷಯ ಬೇಡ ಬಿಡಿ ಎಂದು ಬೇರೆ ಮಾತಿನತ್ತ ಹೊರಳಿದರು. ಆಗ ಜೆಡಿಎಸ್‌ನ ಕೋನರೆಡ್ಡಿ, ಚೆನ್ನಾಗಿ ಮಾತನಾಡುತ್ತಿದ್ದೀರಿ, ಮಾತನಾಡಿ ಸರ್ರ ಎಂದಾಗ, ಕೋನರೆಡ್ಡಿ ನಿನಗೆ ಗೊತ್ತಿಲ್ಲದ್ದನ್ನು ನಾನು ಹೇಳುತ್ತಿದ್ದೇನೆ ಎಂದು ಟಾಂಗ್‌ ನೀಡಿ ಸುಮ್ಮನಾಗಿಸಿದರು.

ಪ್ರಾಣಿ ಸಾಕುವಂತಿಲ್ಲ: ಮತ್ತೂಂದು ಸಂದರ್ಭದಲ್ಲಿ ಕುರಿ ಕಾಯೋರು ಮಾತ್ರ ಕುರುಬರಲ್ಲ. ನಮ್ಮ ಸರ್ಕಾರ ಕುರಿ-ಮೇಕೆ ಸತ್ತರೂ ಪರಿಹಾರ ಕೊಡುವ ಯೋಜನೆ ಜಾರಿಗೆ ತಂದಿದೆ ಎಂದು ಹೇಳುತ್ತಿದ್ದಾಗ ಬಿಜೆಪಿಯ ಉಮೇಶ್‌ ಕತ್ತಿ, ಎಮ್ಮೆ ಕೋಣಗಳಿಗೆ ಪರಿಹಾರ ಕೊಟ್ಟಿಲ್ಲ ಎಂದು ತಕರಾರು ತೆಗೆದರು. ಆಗ ಮುಖ್ಯಮಂತ್ರಿಗಳು, ನೀನು ಕುರಿ ಸಾಕಿದ್ದೀಯಾ, ಎಮ್ಮೆ ಸಾಕಿದ್ದೀಯಾ ಎಂದು 
ಪ್ರಶ್ನಿಸಿದರು. ಅದಕ್ಕೆ ಉಮೇಶ್‌ ಕತ್ತಿ, ನಾವು ಲಿಂಗಾಯತರು. ಪ್ರಾಣಿ ಸಾಕವಂತಿಲ್ಲ ಎಂದು ಎಂ.ಬಿ.ಪಾಟೀಲರತ್ತ ತೋರಿಸಿ ಅವರು ವೀರಶೈವ, ಲಿಂಗಾಯಿತ ಎಂದು ಜಗಳ ಹಚ್ಚಿ ನಾವು ಏನೂ ಸಾಕಲಾರದಂತೆ ಮಾಡಿದ್ದಾರೆ ಎಂದರು. ಆಗ ಸಿದ್ದರಾಮಯ್ಯ, “ಅದೇ ನಿಮ್ಮ ತಪ್ಪು ಕಲ್ಪನೆ. ನಮ್ಮ ಕಡೆ ಎಲ್ಲರೂ ಪಶು ಸಂಗೋಪನೆ ಮಾಡುತ್ತಾರೆ. ನಾನು ಕುರಿ ಕಾಯಲು ಹೋಗಿರಲಿಲ್ಲ. ಆದರೆ,
ಎಮ್ಮೆ ಮೇಯಿಸಿದ್ದೇನೆ. ಈ ಭಾಗದಲ್ಲಿ ಎಮ್ಮೆ, ಕೋಣ ಸಾಕುತ್ತಾರೆ. ಅವು ಸತ್ತರೂ 10 ಸಾವಿರ ರೂ. ಪರಿಹಾರ ಕೊಡಿಸುತ್ತೇನೆ. ನಿನಗೆ ಖುಷಿಯಾ’ ಎಂದು ಪ್ರಶ್ನಿಸಿದರು. ಉಮೇಶ್‌ಕತ್ತಿ ತಲೆಯಾಡಿಸಿ ಕುಳಿತುಕೊಂಡರು.

Advertisement

ಈ ಮಧ್ಯೆ, ಮುಖ್ಯಮಂತ್ರಿಯವರು ಉತ್ತರ ನೀಡುತ್ತಿದ್ದಾಗ ಸಚಿವ ಬಸವರಾಜ ರಾಯರೆಡ್ಡಿ ಪದೇಪದೆ ಎದ್ದು ಅಂಕಿ-ಅಂಶ ನೀಡಿ ಅವರ ನೆರವಿಗೆ ಬರುತ್ತಿದ್ದರು. ಆಗ, “ಏ ಸುಮ್ನಿರಪ್ಪ ನಾನೇ ಹೇಳೆ¤àನೆ. ಇಲ್ಲಾಂದ್ರೆ ನೀನೇ ಉತ್ತರ ಕೊಟ್ಟುಬಿಡು’ ಎಂದರು. ಈ ಬಸವರಾಯರಾಯರಡ್ಡಿ ಅಂಕಿ-ಅಂಶ ಮೊಬೈಲ್‌ನಲ್ಲಿ ಇಟ್ಟುಕೊಳ್ತಾನೆ. ಆದರೆ, ನನಗೆ ಮೊಬೈಲ್‌ ಗಿಬೈಲ್‌ ಆಗಲ್ಲ ಎಂದರು. ನಂಜುಂಡಪ್ಪ ವರದಿ ಅನುಷ್ಠಾನದ ಬಗ್ಗೆ ಬಸವರಾಜ ರಾಯರಡ್ಡಿ ನೀಡಿದ ಅಂಕಿ-ಅಂಶ ತಪ್ಪಾದಾಗ ಏನಪ್ಪಾ ನನ್ನನ್ನು ದಾರಿ ತಪ್ಪಿಸುತ್ತಿದ್ದೀಯಾ ಎಂದು ಸುಮ್ಮನಾಗಿಸಿದರು. ಮತ್ತೂಂದು ಸಂದರ್ಭದಲ್ಲಿ ಜೆಡಿಎಸ್‌ನ ಎಚ್‌ .ಡಿ.ರೇವಣ್ಣ ತಮ್ಮ ಆಸನದಿಂದ ಎದ್ದು ಹೊರಡಲು ಸಜ್ಜಾದಾಗ, ಯಾಕಪ್ಪಾ ರೇವಣ್ಣ, ರಾಹುಕಾಲಾನಾ ಕೂತ್ಕೊ ಎಂದರು. ಆಗ ರೇವಣ್ಣ ನಗುಮುಖದೊಂದಿಗೆ ನಮ್ಮ ದತ್ತಾಣ್ಣೋರು ಇದ್ದಾರಲ್ಲ ಎಂದು ಮತ್ತೆ ಕುಳಿತರು. ಸಮಾಜ ಕಲ್ಯಾಣ ಇಲಾಖೆ ಮಾಹಿತಿ ನೀಡುವಾಗ 86 ಸಾವಿರ ಕೋಟಿ ರೂ. ವಾರ್ಷಿಕ ವೆಚ್ಚ ಮಾಡುತ್ತಿದ್ದೇವೆ. ಆಂಜನೇಯ ರಿಚ್ಚೆಸ್ಟ್‌ ಮಿನಿಸ್ಟರ್‌ ಇನ್‌ ಮೈ ಕ್ಯಾಬಿನೆಟ್‌ ಎಂದರು. 

“ಒಡಕಿನ ಧ್ವನಿ ಬೇಡ’
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಹೇಳಿದ್ದ ಬಿಜೆಪಿಯ ಉಮೇಶ್‌ಕತ್ತಿ ಕಾಲೆಳೆದ ಸಿದ್ದರಾಮಯ್ಯ, ಇನ್ನೆಂದೂ ಪ್ರತ್ಯೇಕ ರಾಜ್ಯದ ಮಾತು ಬರಬಾರದು ಎಂದು ತಾಕೀತು ಮಾಡಿದರು. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದವರಲ್ಲಿ ಉತ್ತರ ಕರ್ನಾಟಕ ಭಾಗದವರೇ ಹೆಚ್ಚು. ಅವರೆಲ್ಲರ ಶ್ರಮದಿಂದ ಅಖಂಡ ಕರ್ನಾಟಕದಲ್ಲಿರುವ ನಾವು ಒಡಕಿನ ಧ್ವನಿ ಎತ್ತಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next