Advertisement

ರಕ್ಷಣ ಕ್ಷೇತ್ರ: ಭಾರತ ಶೀಘ್ರ ಸ್ವಾವಲಂಬಿ: ಡಾ|ಜಿ. ಸತೀಶ್‌ ರೆಡ್ಡಿ

12:35 AM Nov 20, 2022 | Team Udayavani |

ಮಣಿಪಾಲ: ದೇಶದ ರಕ್ಷಣ ವಲಯಕ್ಕೆ ಅವಶ್ಯವಿರುವ ಸೇನಾ ತಂತ್ರಜ್ಞಾನದ ಅಭಿವೃದ್ಧಿ, ಅನುಷ್ಠಾನ, ವಿನ್ಯಾಸ, ಪ್ರಯೋಗ ಹಾಗೂ ಉತ್ಪಾದನೆ ಹೀಗೆ ಎಲ್ಲವೂ ಭವಿಷ್ಯದಲ್ಲಿ ಭಾರತದಲ್ಲೇ ನಡೆಯಲಿದೆ ಮತ್ತು ಆ ಮೂಲಕ ರಕ್ಷಣ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲಿದ್ದೇವೆ ಎಂದು ಕೇಂದ್ರ ರಕ್ಷಣ ಸಚಿವರ ವೈಜ್ಞಾನಿಕ ಸಲಹೆಗಾರ ಡಾ| ಜಿ. ಸತೀಶ್‌ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮಾಹೆ ವಿ.ವಿ.ಯ 30ನೇ ಘಟಿಕೋ ತ್ಸವದ ಎರಡನೇ ದಿನ (ಶನಿವಾರ) ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಜಾಗತಿಕ ಸಾಮರಸ್ಯ ಸಾಧಿಸುವ ಜತೆಗೆ ದೇಶದ ಅಭಿವೃದ್ಧಿ ಮತ್ತು ಗುರಿ ಸಾಧನೆಯಲ್ಲಿ ಶಕ್ತಿ ಮೀರಿ ಪ್ರಯತ್ನಿಸ ಬೇಕು ಎಂದು ಸಲಹೆ ನೀಡಿದರು.

ಸೇನೆಯಲ್ಲಿ ಸ್ವದೇಶಿ ನಿರ್ಮಿತ ಉತ್ಪನ್ನಗಳ ಬಳಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ರಕ್ಷಣ ಕ್ಷೇತ್ರಕ್ಕೆ ಬೇಕಾದ ಪರಿಕರಗಳನ್ನು ಅಭಿವೃದ್ಧಿ ಪಡಿ ಸಲು ಸ್ಟಾರ್ಟ್‌ಅಪ್‌ಗ್ಳಿಗೂ ಮುಕ್ತ ಅವಕಾಶವಿದೆ. ಸರಕಾರದ ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟಿಡಿಎಫ್), ಡೇರ್‌ ಟು ಡೀಮ್‌ ಕಾರ್ಯಕ್ರಮಗಳು ಯುವ ಜನತೆ ಹೆಚ್ಚೆಚ್ಚು ಡಿಫೆನ್ಸ್‌ ಅಪ್ಲಿಕೇಶನ್‌ ವಿಭಾಗದಲ್ಲಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ ಎಂದರು.

ಪ್ರಸ್ತುತ ಅಗತ್ಯವಿರುವ ನವೀನ ಅನ್ವೇಷಣೆಗಳ ಬಗ್ಗೆ ವಿವರಿಸಿ, ಶಿಕ್ಷಣ ಸಂಸ್ಥೆಗಳು ಅನ್ವೇಷಣೆ ಮತ್ತು ಉದ್ಯಮಶೀಲತೆಯ ಹಬ್‌ ನಿರ್ಮಾಣದ ಕೇಂದ್ರಗಳಾಗುವ ಮೂಲಕ ಸಂಶೋಧನೆಯ ಜತೆಗೆ ಜ್ಞಾನದ ವಿನಿಮಯಕ್ಕೂ ಸಹಕಾರಿ ಯಾಗಬೇಕು. ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್‌ ಇಂಟಲಿಜೆನ್ಸಿ) ಹಾಗೂ ಇಂಡಸ್ಟ್ರೀ 4.0 ಕೂಡ ತಂತ್ರಜ್ಞಾನ ಕ್ಷೇತ್ರಕ್ಕೆ ಬರುತ್ತಿವೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಗುರಿ ಸಾಧನೆಯ ಜತೆಗೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.

ಶಕ್ತಿ ಮೀರಿ ಸೇವೆ
ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಮಾಹೆ ವಿ.ವಿ.ಯಿಂದ ವಿವಿಧ ಪದವಿ ಪಡೆದವರು ಭವಿಷ್ಯದಲ್ಲಿ ಉತ್ತಮ ವೈದ್ಯರು, ಎಂಜಿನಿಯರ್, ನಾಯಕರು, ಸಂಶೋಧಕರು, ಅನ್ವೇಷಣಕಾರರಾಗಿ ಶಕ್ತಿ ಮೀರಿ ಸೇವೆ ಸಲ್ಲಿಸಲಿದ್ದಾರೆ. ಈ ಮೂಲಕ ಸಮಾಜದಲ್ಲಿರುವ ಪ್ರತಿಭೆಯ ಅಂತರ ಸರಿಪಡಿಸುವ ಜತೆಗೆ ದೇಶಕ್ಕೆ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

Advertisement

ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, ಜಗತ್ತು ಸದಾ ಬದಲಾಗುತ್ತಿರುತ್ತದೆ ಮತ್ತು ಪ್ರತೀ ತಿರುವಿನಲ್ಲೂ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿರುತ್ತವೆ. ಶಿಕ್ಷಣದ ಜತೆಗೆ ಉತ್ತಮ ಕೌಶಲ ಹಾಗೂ ಜ್ಞಾನವನ್ನು ಪಡೆದಿರುವ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದರು.

ಮಾಹೆ ಟ್ರಸ್ಟ್‌ ಮುಖ್ಯಸ್ಥರೂ ಆದ ಎಂಇಎಂಜಿ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈ, ಪ್ರೊ ವೈಸ್‌ ಚಾನ್ಸಲರ್‌ಗಳಾದ ಡಾ| ವೆಂಕಟ್ರಾಯ ಪ್ರಭು, ಡಾ| ದಿಲೀಪ್‌ ಜಿ. ನಾಯಕ್‌, ಡಾ| ಪ್ರಜ್ಞಾ ರಾವ್‌, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಕುಲಸಚಿವ (ಮೌಲ್ಯಮಾಪನ) ಡಾ| ವಿನೋದ್‌ ವಿ. ಥೋಮಸ್‌ ಉಪಸ್ಥಿತರಿದ್ದರು. ಕೆಎಂಸಿ ಮಂಗಳೂರು ಡೀನ್‌ ಡಾ| ಉಣ್ಣಿಕೃಷ್ಣನ್‌ ಬಿ. ವಂದಿಸಿ, ನಿರೂಪಿಸಿದರು.

ಚಿನ್ನದ ಪದಕ ವಿಜೇತರು
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಮಣಿಪಾಲ ಕೆಎಂಸಿಯ ಹಿಮಾಂಶು, ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌ನ ವಿನಿತಾ ರೋಸ್‌ ಮೋನಿಸ್‌, ಮಣಿಪಾಲ ಸ್ಕೂಲ್‌ ಆಫ್ ಇನಾರ್ಮೆಶನ್‌ ಸೈನ್ಸಸ್‌ನ ಸತೀಶ್‌ ನಾಯಕ್‌, ಎಂಐಟಿಯ ಶಾಹ ದಿಯಾ ಹೇಮಂತ್‌ಕುಮಾರ್‌, ವಾಗಾÏದ ಆಹನ ಭಂಭನಿಗೆ ಶುಕ್ರವಾರ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರು ಚಿನ್ನದ ಪದಕ ನೀಡಿ ಸಮ್ಮಾನಿಸಿದರು.

ಶನಿವಾರ ಡಾ| ಜಿ. ಸತೀಶ್‌ ರೆಡ್ಡಿ ಅವರು ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ ವೆಸ್ತಾ ವೈಷ್ಣವಿ, ಮಣಿಪಾಲ್‌ ಕಾಲೇಜ್‌ ಆಫ್ ಫಾರ್ಮಸುಟಿಕಲ್‌ ಸೈನ್ಸಸ್‌ನ ಜೆನಿಲ್ಡಾ ಜಾಸ್ಮಿನ್‌ ಮಥಾಯಿಸ್‌, ಮಣಿಪಾಲ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ ಆ್ಯಂಡ್‌ ಪ್ಲಾನಿಂಗ್‌ನ ಅರ್ಚನಾ ಶಿವಪ್ರಕಾಶ್‌, ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ನ ಜೊಸ್ಸಿಲ್‌ ಜೋಸ್ನಾ ಜೊಸೆಫ್ ನಝೆರೆತ್‌, ಮಂಗಳೂರಿನ ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸಸ್‌ನ ರುಪ್ಸಾ ತಾರಾಫೆರ್‌ಗೆ ಚಿನ್ನದ ಪದಕ ಪ್ರದಾನ ಮಾಡಿದರು. ಶನಿವಾರ 1,648 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next