Advertisement

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

08:19 AM Apr 25, 2024 | Team Udayavani |

ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಪ್ರತಿಯೊಂದು ರಾಷ್ಟ್ರವೂ ತನ್ನ ಸಾರ್ವಭೌಮತೆಯನ್ನು ಕಾಯ್ದುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಪ್ರಾದೇಶಿಕ ಸಮಗ್ರತೆ ಸಹಿತ ದೇಶದ ಎಲ್ಲ ಹಿತಾಸಕ್ತಿಗಳನ್ನು ರಕ್ಷಿಸಬೇಕಾದುದು ಆ ರಾಷ್ಟ್ರದ ಕರ್ತವ್ಯ ಕೂಡ. ದೇಶಕ್ಕೆ ಆಪತ್ತು ಎದುರಾದಾಗ, ವಿದೇಶಿ ಆಕ್ರಮಣ ನಡೆದಾಗ ರಕ್ಷಣೆಗಾಗಿ ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ರಕ್ಷಣ ವ್ಯವಸ್ಥೆಯನ್ನು ಹೊಂದಿರಲೇಬೇಕು. ಆಧುನಿಕ ಸವಾಲುಗಳನ್ನು ಎದುರಿಸಲು ಎದುರಾಳಿ ರಕ್ಷಣ ಪಡೆಗಳ ಸಾಮರ್ಥ್ಯಕ್ಕೆ ಮಿಗಿಲಾದ ಶಸ್ತ್ರಾಸ್ತ್ರಗಳನ್ನು ದೇಶದ ರಕ್ಷಣೆ ಪಡೆಗಳಿಗೆ ಒದಗಿಸುವುದು ಅತ್ಯಗತ್ಯ. ವರ್ಷಗಳುರುಳಿದಂತೆ ಜಾಗತಿಕ ಮತ್ತು ವಿಶ್ವದ ಬಲಾಡ್ಯ ರಾಷ್ಟ್ರಗಳ ರಕ್ಷಣ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಲೇ ಸಾಗಿದೆ. ಕಳೆದ ಕೆಲವು ದಶಕಗಳಿಂದೀಚೆಗೆ ಭಾರತ ಕೂಡ ತನ್ನ ರಕ್ಷಣ ಬಜೆಟ್‌ ಅನ್ನು ಹೆಚ್ಚಿಸುತ್ತಲೇ ಬಂದಿದೆ. 2022ರಲ್ಲಿ ಭಾರತ ರಕ್ಷಣ ವೆಚ್ಚದಲ್ಲಿ ವಿಶ್ವದಲ್ಲಿ 5ನೇ ಸ್ಥಾನದಲ್ಲಿದ್ದರೆ 2023ರಲ್ಲಿ 4ನೇ ಸ್ಥಾನಕ್ಕೇರಿದೆ. ಕಳೆದ ವರ್ಷ ಭಾರತ ಬರೋಬ್ಬರಿ 6.96 ಲಕ್ಷ ಕೋಟಿ ರೂ.ಗಳನ್ನು ರಕ್ಷಣೆಗಾಗಿ ವ್ಯಯಿಸಿದೆ.

Advertisement

ಜಾಗತಿಕ ಮತ್ತು ಪ್ರಾದೇಶಿಕ ಉದ್ವಿಗ್ನತೆ, ಅಂತಾರಾಷ್ಟ್ರೀಯ ಸಂಘರ್ಷಗಳು ಇತ್ತೀಚಿನ ದಶಕಗಳಲ್ಲಿ ಸರ್ವೇಸಾಮಾನ್ಯ ಬೆಳವಣಿಗೆಯಾಗಿ ಮಾರ್ಪಟ್ಟಿರುವ ಕಾರಣದಿಂದಾಗಿ 2023ರಲ್ಲಿ ಜಾಗತಿಕ ರಕ್ಷಣ ವೆಚ್ಚದಲ್ಲಿ ಗರಿಷ್ಠ ಶೇ. 7ರಷ್ಟು ಏರಿಕೆಯಾಗಿದೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಭಾರತದ ರಕ್ಷಣ ವೆಚ್ಚ ಶೇ. 4.2ರಷ್ಟು ಹೆಚ್ಚಳವನ್ನು ಕಂಡಿದೆ. ಇತ್ತೀಚಿನ ವರ್ಷಗಳವರೆಗೂ ವಿಶ್ವದಲ್ಲಿ ಶಸ್ತ್ರಾಸ್ತ್ರಗಳು ಮತ್ತು ರಕ್ಷಣ ಸಾಮಗ್ರಿಗಳ ಆಮದಿಗೆ ಭಾರೀ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿದ್ದ ಭಾರತ, ಕಳೆದ ಕೆಲವು ವರ್ಷಗಳಿಂದೀಚೆಗೆ ರಕ್ಷಣ ಆಮದು ವೆಚ್ಚವನ್ನು ತಗ್ಗಿಸುತ್ತಲೇ ಬಂದಿದೆ. ಕಳೆದ ವರ್ಷ ರಕ್ಷಣೆಗಾಗಿ ವ್ಯಯಿಸಿದ ಒಟ್ಟು ಮೊತ್ತದಲ್ಲಿ ಶೇ.75ರಷ್ಟನ್ನು ಸ್ವದೇಶಿ ನಿರ್ಮಿತ ರಕ್ಷಣ ಸಾಧನ, ಶಸ್ತ್ರಾಸ್ತ್ರಗಳ ಉತ್ಪಾದನೆಗೆ ವೆಚ್ಚ ಮಾಡಿದೆ. ರಕ್ಷಣ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ದಿಸೆಯಲ್ಲಿ ದೃಢ ಹೆಜ್ಜೆ ಇರಿಸಿರುವ ಭಾರತ, ಶಸ್ತ್ರಾಸ್ತ್ರ ಮತ್ತು ರಕ್ಷಣ ಸಾಧನ, ಸಲಕರಣೆಗಳ ಅಭಿವೃದ್ಧಿ ಮತ್ತು ಉತ್ಪಾದನೆಗೆ ಗರಿಷ್ಠ ಆದ್ಯತೆಯನ್ನು ನೀಡಿದೆ.

ಭಾರತದ ಪಾಲಿಗೆ ನೆರೆಯ ದೇಶಗಳಾದ ಚೀನ ಮತ್ತು ಪಾಕಿಸ್ಥಾನ ಇಂದಿಗೂ ಬೆದರಿಕೆಯ ಮತ್ತು ಅಪಾಯಕಾರಿ ದೇಶಗಳಾಗಿ ಉಳಿದಿವೆ. ಇವೆರಡೂ ಗಡಿಯಲ್ಲಿ ಪದೇಪದೆ ತಕರಾರು ತೆಗೆದು ದೇಶದ ಭದ್ರತೆಗೆ ಅಪಾಯವನ್ನು ತಂದೊಡ್ಡುತ್ತಿವೆ. ಜತೆಯಲ್ಲಿ ಭಯೋತ್ಪಾದಕರು ಮತ್ತು ನುಸುಳುಕೋರರನ್ನು ಭಾರತದ ವಿರುದ್ಧ ಛೂ ಬಿಟ್ಟು ದೇಶದ ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡುತ್ತಿವೆ. ಹೀಗಾಗಿ ಗಡಿಭಾಗದಲ್ಲಿ ರಕ್ಷಣ ಮೂಲಸೌಕರ್ಯ ವೃದ್ಧಿ, ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣ ಪಡೆಗಳನ್ನು ನಿಯೋಜಿಸುವ ಜತೆಯಲ್ಲಿ ಈ ಎರಡು ರಾಷ್ಟ್ರಗಳಿಂದ ಎದುರಾಗಬಹುದಾದ ಸಂಭಾವ್ಯ ಅಪಾಯ, ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಭಾರತ ತನ್ನ ಸೇನಾ ಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ.

ಜಾಗತಿಕವಾಗಿ ಯಾವುದೇ ಸಂಘರ್ಷ, ಉದ್ವಿಗ್ನತೆಯ ಪರಿಸ್ಥಿತಿ ತಲೆದೋರಿದಾಗ ವಿಶ್ವ ಸಮುದಾಯಕ್ಕೆ ಶಾಂತಿ ಮಂತ್ರ ಬೋಧಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಭಾರತ, ಸಂಧಾನ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಕಿವಿಮಾತು ಹೇಳುತ್ತಲೇ ಬಂದಿದೆ. ಹಾಗೆಂದು ಸ್ವರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಸಶಕ್ತ ಮತ್ತು ಸಮರ್ಥ ರಕ್ಷಣ ಪಡೆಗಳನ್ನು ಹೊಂದುವ ಮೂಲಕ ತನ್ನ ಸಾರ್ವಭೌಮತೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next