Advertisement

ದಾಳಿಕೋರರಿಂದ ರಕ್ಷಿಸಿಕೊಳ್ಳಲು ಪೊಲೀಸ್‌ ಫೈರಿಂಗ್‌

11:56 AM Jan 25, 2017 | Team Udayavani |

ಬೆಂಗಳೂರು: ವಾಹನ ತಪಾಸಣೆಗೆ ಮುಂದಾದ ಪುಟ್ಟೇನಹಳ್ಳಿ ಠಾಣೆ ಪೊಲೀಸರ ಮೇಲೆ ದುಷ್ಕರ್ಮಿಗಳಿಬ್ಬರು ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.

Advertisement

ಪುಟ್ಟೇನಹಳ್ಳಿ ಕೆರೆ ಬಳಿ ಸೋಮವಾರ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಮೂರು ತಂಡ ರಚಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.

ಏನಾಯ್ತು ಸೋಮವಾರ ರಾತ್ರಿ?: ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಧರ್ಮೇಂದ್ರ ಹಾಗೂ ಹೆಡ್‌ಕಾನ್ಸ್‌ಟೇಬಲ್‌ ರಾಜೇಶ್‌ ಪುಟ್ಟೇನಹಳ್ಳಿ ಕೆರೆ ಬಳಿ ಸೋಮವಾರ ರಾತ್ರಿ 11.30ರ ಸುಮಾರಿನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ಬನ್ನೇರುಘಟ್ಟ ರಸ್ತೆ ಕಡೆಯಿಂದ ಪುಟ್ಟೇನಹಳ್ಳಿ ಕಡೆಗೆ ಆ್ಯಕ್ವೀವ್‌ ಹೋಂಡಾದಲ್ಲಿ ಬಂದಿದ್ದಾರೆ. 

ದ್ವಿಚಕ್ರ ವಾಹನದಲ್ಲಿ ನಂಬರ್‌ ಪ್ಲೇಟ್‌ ಇಲ್ಲದನ್ನು ಗಮನಿಸಿದ್ದ ಹೆಡ್‌ಕಾನ್ಸ್‌ಟೇಬಲ್‌ ರಾಜೇಶ್‌ ವಾಹನ ಅಡ್ಡಗಟ್ಟಿದ್ದಾರೆ. ಈ ವೇಳೆ ಹಿಂಬದಿ ಸವಾರ ಏಕಾಏಕಿ ರಾಜೇಶ್‌ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ರಾಜೇಶ್‌ ಹಿಂದಕ್ಕೆ ಹೋಗಿದ್ದು, ಕೂದಲೆಳೆ ಅಂತರದಲ್ಲಿ ಪರಾಗಿದ್ದಾರೆ. ಕೂಡಲೇ ಇನ್ಸ್‌ಪೆಕ್ಟರ್‌ ಧರ್ಮೇಂದ್ರ ಅವರು ತಮ್ಮ ಸೇವಾ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಬೈಕ್‌ ನಿಲ್ಲಿಸುಂತೆ ದುಷ್ಕರ್ಮಿಗಳಿಗೆ ಸೂಚಿಸಿದ್ದಾರೆ.

ಇನ್ಸ್‌ಪೆಕ್ಟರ್‌ ಗುಂಡು ಹಾರಿಸುತ್ತಲೆ ವಾಹನ ನಿಲ್ಲಿಸುಂತೆ ನಾಟಕವಾಡಿ ಬಳಿಕ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿ, ಇನ್ಸ್‌ಪೆಕ್ಟರ್‌ ಮೇಲೆ ಹರಿಸಲು ಯತ್ನಿಸಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್‌ ಮತ್ತೂಮ್ಮೆ ದ್ವಿಚಕ್ರ ವಾಹನದ ಮೇಲೆ ಮತ್ತೂಂದು ಗುಂಡು ಹಾರಿಸಿದ್ದಾರೆ. ಬೈಕ್‌ಗೆ ಗುಂಡು ತಗುಲಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಎರಡನೇ ಬಾರಿ ಇನ್ಸ್‌ಪೆಕ್ಟರ್‌ ಧರ್ಮೇಂದ್ರ ಅವರು ಹಾರಿಸಿದ ಗುಂಡು ಆರೋಪಿಗಳಿಗೆ ತಗುಲಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. 

Advertisement

ಸಿಸಿವಿಟಿ ಪರಿಶೀಲನೆ: ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ಪರಿಶೀಲಿಸಲಾಗಿದ್ದು, ಆರೋಪಿಗಳ ಬಗ್ಗೆ ಮಾಹಿತಿ ದೊರೆತಿಲ್ಲ. ಸೋಮವಾರ ರಾತ್ರಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಮೂರು ಪಾಯಿಂಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಈ ಪೈಕಿ ಪುಟ್ಟೇನಹಳ್ಳಿ ಕೆರೆ ಬಳಿ ಇನ್ಸ್‌ಪೆಕ್ಟರ್‌ ಧರ್ಮೇಂದ್ರ ಹಾಗೂ ರಾಜೇಶ್‌ ತಪಾಸಣೆ ನಡೆಸುತ್ತಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹುಳಿಮಾವಿನಲ್ಲಿ ಸುಲಿಗೆ ಪ್ರಕರಣಗಳು ವರದಿಯಾಗುತ್ತಿದ್ದವು. ಆದರಿಂದ ಕಳೆದ ಮೂರು ದಿನಗಳಿಂದ ನಿರಂತರವಾಗಿ ಪುಟ್ಟೇನಹಳ್ಳಿ ಕೆರೆ ಬಳಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ವಾಹನ ತಪಾಸಣೆ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

3 ದಿನದ ಹಿಂದೆ ತಪ್ಪಿಸಿಕೊಂಡವರ್ಯಾರು? 
ಮೂರು ದಿನಗಳ ಹಿಂದೆ ಪುಟ್ಟೇನಹಳ್ಳಿ ಕೆರೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಬೈಕ್‌ ನಿಲ್ಲಿಸದೇ ಹೋಗಿದ್ದರು. ಪೊಲೀಸ್‌ ಸಿಬ್ಬಂದಿ ಅವರನ್ನು ಬೆನ್ನಟ್ಟಿದಾರದರೂ ದುಷ್ಕರ್ಮಿಗಳು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ದುಷ್ಕರ್ಮಿಗಳ ತಂಡವೊಂದು ಈ ಮಾರ್ಗದಲ್ಲಿ ದರೋಡೆಗೆ ಹೊಂಚು ಹಾಕಿತ್ತು ಎಂಬ ಮಾಹಿತಿ ಇತ್ತು. ಇದೀಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಗುಂಡು ತಗುಲಿದವರು ಯಾರದಾರೂ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದರೆ ಮಾಹಿತಿ ನೀಡುವಂತೆ ಎಲ್ಲಾ ಆಸ್ಪತ್ರೆಗಳಿಗೆ ತಿಳಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಸುಬ್ರಮಣ್ಯಪುರ ಎಸಿಪಿ ಅವರ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದೆ.
-ಡಾ.ಎಸ್‌.ಡಿ.ಶರಣಪ್ಪ, ಡಿಸಿಪಿ (ದಕ್ಷಿಣ ವಿಭಾಗ) 

Advertisement

Udayavani is now on Telegram. Click here to join our channel and stay updated with the latest news.

Next