ನವದೆಹಲಿ: ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಭಾನುವಾರ (ಜೂನ್ 27) ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಗೆ ಭೇಟಿ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ. ಒಂದು ದಿನಕ್ಕಿಂತ ಹೆಚ್ಚು ಭೇಟಿ ನೀಡಲಿರುವ ಸಿಂಗ್ ಅವರು, ಬಿಆರ್ ಒ ಮೂಲಸೌಕರ್ಯ ಕಾರ್ಯಕ್ರಮಗಳ ಪರಿಶೀಲನೆ ಪ್ರಮುಖ ಭಾಗವಾಗಿದ್ದು, ಏತನ್ಮಧ್ಯೆ ವಾಸ್ತವ ನಿಯಂತ್ರಣ ರೇಖೆಯ ಭೇಟಿಯನ್ನು ತಳ್ಳಿಹಾಕುವಂತಿಲ್ಲ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸಿ ಮಾನವೀಯತೆ ಮೆರೆದ ಸಭಾಪತಿ ಹೊರಟ್ಟಿ
ಲಡಾಖ್ ನ ಆಯಕಟ್ಟಿನ ಸ್ಥಳವಾದ ಗೋಗ್ರಾ ಮತ್ತು ಬಿಸಿ ನೀರಿನ ಬುಗ್ಗೆಗಳಂತಹ ಪ್ರದೇಶಗಳಿಂದ ಚೀನಾ ಸೇನೆ ಇನ್ನೂ ತನ್ನ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳದ ಕಾರಣ ಸಿಂಗ್ ಅವರು ಈ ಭೇಟಿ ನೀಡುತ್ತಿರುವುದಾಗಿ ವರದಿ ತಿಳಿಸಿದೆ.
ಕಳೆದ ವರ್ಷ ಚೀನಾ ಸೇನಾಪಡೆಗಳು ವಾಸ್ತವ ಗಡಿ ರೇಖೆ ಪ್ರದೇಶದಲ್ಲಿ ಠಿಕಾಣಿ ಹೂಡುವ ಮೂಲಕ ಉದ್ವಿಗ್ನ ಸ್ಥಿತಿಯನ್ನು ಮುಂದುವರಿಸಲು ಕಾರಣವಾಗಿತ್ತು. ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿರಾಕರಿಸಿದ್ದ ಚೀನಾ ಕಳೆದ ವಾರ, ಉದ್ವಿಗ್ನ ಸ್ಥಿತಿಗೆ ಭಾರತ ಕಾರಣ ಎಂದು ದೂಷಿಸಿತ್ತು.
12ನೇ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಯಲ್ಲಿ, ಕೇಂದ್ರ ವಿದೇಶಾಂಗ ಸಚಿವಾಲಯ, ಚಾಲ್ತಿಯಲ್ಲಿರುವ ದ್ವಿಪಕ್ಷೀಯ ಒಪ್ಪಂದ ಮತ್ತು ಪ್ರೋಟೊಕಾಲ್ ಪ್ರಕಾರ ಪಶ್ಚಿಮ ವಲಯದ ಎಲ್ ಎಸಿ ಸೇರಿದಂತೆ ಎಲ್ಲಾ ಆಯಕಟ್ಟಿನ ಸ್ಥಳಗಳಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ನಿರ್ಧರಿಸಲು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.