Advertisement

ವೀರ ಯೋಧರ ಸ್ಮರಣೆ : ದೇಶಾದ್ಯಂತ ಕಾರ್ಗಿಲ್‌ ಹುತಾತ್ಮರಿಗೆ ಗೌರವ ನಮನ ಸಲ್ಲಿಕೆ

03:13 AM Jul 27, 2020 | Hari Prasad |

ಹೊಸದಿಲ್ಲಿ: ಕಾರ್ಗಿಲ್‌ ವಿಜಯದ 21ನೇ ವಿಜಯೋತ್ಸವದ ಅಂಗವಾಗಿ ರವಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.

Advertisement

ಮತ್ತು ಈ ಸಂದರ್ಭದಲ್ಲಿ ಭಾರತೀಯ ಯೋಧರ ಅಚಲ ಧೈರ್ಯ, ದೇಶಪ್ರೇಮ ಮತ್ತು ಶೌರ್ಯವನ್ನು ಕೊಂಡಾಡಿದ್ದಾರೆ.

1999ರ ಜುಲೈ 26ರಂದು ಪಾಕಿಸ್ಥಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ದುರ್ಗಮ ಪ್ರದೇಶಗಳನ್ನು ಭಾರತೀಯ ಸೇನಾಪಡೆಯ ಯೋಧರು ಮರಳಿ ವಶಕ್ಕೆ ಪಡೆದಿದ್ದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್‌ ವಿಜಯ ದಿವಸ್‌’ ಆಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿ, ನಮ್ಮ ಸಶಸ್ತ್ರ ಪಡೆಗಳ ಯೋಧರ ಧೈರ್ಯ, ಶೌರ್ಯ ಮತ್ತು ದೃಢ ನಿಶ್ಚಯ 1999ರಲ್ಲಿ ನಮ್ಮ ದೇಶವನ್ನು ರಕ್ಷಿಸಿದೆ ಎಂದು ಶ್ಲಾಘಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಟ್ವೀಟ್‌ ಮಾಡಿ, ಭಾರತಮಾತೆಯನ್ನು ರಕ್ಷಿಸಲು ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಯೋಧರು ಮತ್ತು ಅವರ ಕುಟುಂಬದವರಿಗೆ ದೇಶ ಎಂದಿಗೂ ಕೃತಜ್ಞವಾಗಿರುತ್ತದೆ.

Advertisement

ಕಾರ್ಗಿಲ್‌ ವಿಜಯ ದಿವಸ್‌, ನಮ್ಮ ಸಶಸ್ತ್ರ ಪಡೆಗಳ ನಿರ್ಭೀತ ನಿರ್ಣಯ ಮತ್ತು ಅಸಾಧಾರಣ ಮೌಲ್ಯದ ಸಂಕೇತವಾಗಿದೆ. ಈ ದೇಶದ ನೆಲದ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಹೋರಾಡಿ, ತಮ್ಮ ಪ್ರಾಣವನ್ನು ಅರ್ಪಿಸಿದ ಯೋಧರಿಗೆ ನಾನು ವಂದಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಮಿತ್‌ ಶಾ ಟ್ವೀಟ್‌ ಮಾಡಿ, ಕಾರ್ಗಿಲ್‌ ವಿಜಯ ದಿವಸ್‌, ಭಾರತದ ಸ್ವಾಭಿಮಾನ, ಮೌಲ್ಯ ಮತ್ತು ಸ್ಥಿರ ನಾಯಕತ್ವದ ಸಂಕೇತವಾಗಿದೆ. ತಮ್ಮ ಶೌರ್ಯ, ಪರಾಕ್ರಮಗಳಿಂದ ಕಾರ್ಗಿಲ್‌ನಿಂದ ಶತ್ರುಗಳನ್ನು ಓಡಿಸಿ, ಅಲ್ಲಿ ಮತ್ತೆ ತ್ರಿವರ್ಣ ಧ್ವಜವನ್ನು ಹಾರಿಸಿದ ಭಾರತೀಯ ಯೋಧರಿಗೆ ನಾನು ನಮಸ್ಕರಿಸುತ್ತೇನೆ. ಮಾತೃಭೂಮಿಯನ್ನು ರಕ್ಷಿಸಲು ಪಣತೊಟ್ಟಿರುವ ಭಾರತೀಯ ವೀರರ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಅರ್ಪಿಸಿ, ದೇಶವನ್ನು ರಕ್ಷಿಸುವ ಧೈರ್ಯಶಾಲಿ ಯೋಧರಿಗೆ ನಾನು ನಮಿಸುತ್ತೇನೆ ಎಂದು ತಿಳಿಸಿದ್ದಾರೆ.


ಯುದ್ಧ ಸ್ಮಾರಕಕ್ಕೆ ಭೇಟಿ:
21ನೇ ಕಾರ್ಗಿಲ್‌ ವಿಜಯ ದಿವಸ್‌ ಅಂಗವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ ನಾಯಕ್‌ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಮೂರೂ ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ವೇಳೆ ಕಾರ್ಗಿಲ್‌ ವೀರರನ್ನು ಸ್ಮರಿಸಿದ ರಾಜನಾಥ ಸಿಂಗ್‌, ದೇಶದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹುತಾತ್ಮರನ್ನು ದೇಶ ಎಂದಿಗೂ ಮರೆಯುವುದಿಲ್ಲ. ಕಾರ್ಗಿಲ್‌ ವಿಜಯ ದೇಶದ ಸೇನಾಶಕ್ತಿಯ ಪ್ರತೀಕ. ನಮ್ಮ ನೆಲದ ಮೇಲೆ ಯಾರೇ ವಕ್ರದೃಷ್ಟಿ ಬೀರಲಿ, ಅವರಿಗೆ ಇದೇ ಗತಿ. ಭಾರತದ ಗಡಿಗಳು ಸುರಕ್ಷಿತವಾಗಿದ್ದು, ದೇಶದ ರಕ್ಷಣೆಗೆ ನಮ್ಮ ಸೇನಾಪಡೆಗಳು ಸದಾ ಸನ್ನದ್ಧವಾಗಿವೆ ಎಂದು ಹೇಳಿದರು.

ಫ್ರಾನ್ಸ್‌ ಗೌರವ:
ಭಾರತದ ಕಾರ್ಗಿಲ್‌ ಯೋಧರಿಗೆ ಫ್ರಾನ್ಸ್‌ ಸರಕಾರ ಕೂಡ ಗೌರವ ಸಲ್ಲಿಸಿದೆ. ರವಿವಾರ ಈ ಕುರಿತು ಟ್ವೀಟ್‌ ಮಾಡಿರುವ ಭಾರತದಲ್ಲಿರುವ ಫ್ರಾನ್ಸ್‌ ರಾಯಭಾರಿ ಇಮ್ಯಾನುವಲ್‌ ಲಿನೈಲ್‌, ಭಾರತದ ಸಶಸ್ತ್ರ ಪಡೆಗಳಿಗೆ ನಾವು ಗೌರವ ಸಲ್ಲಿಸುತ್ತೇವೆ. ಫ್ರಾನ್ಸ್‌ ಯಾವತ್ತಿಗೂ ಭಾರತದೊಂದಿಗೆ ಕೈಜೋಡಿಸುತ್ತದೆ ಎಂದು ಬರೆದಿದ್ದು, ಎರಡೂ ದೇಶಗಳ ನಡುವಿನ ರಕ್ಷಣಾ ಸಂಬಂಧದ ಕುರಿತೂ ವಿವರಿಸಿದ್ದಾರೆ. ಫ್ರಾನ್ಸ್‌ನಿಂದ ಭಾರತವು ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಿದ್ದು, ಸದ್ಯದಲ್ಲೇ ಅವು ಭಾರತಕ್ಕೆ ಹಸ್ತಾಂತರಗೊಳ್ಳಲಿದೆ.

ರಾಷ್ಟ್ರಪತಿಯಿಂದ 20 ಲಕ್ಷ ರೂ. ದೇಣಿಗೆ


ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ಸೂಚಕವಾಗಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ರವಿವಾರು ದೆಹಲಿಯ ಸೇನಾ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸಿಬಂದಿಗೆ ಅಗತ್ಯ ವೈದ್ಯಕೀಯ ಸಲಕರಣೆಗಳ ಖರೀದಿಗೆ ನೆರವಾಗುವ ಸಲುವಾಗಿ ಈ ಮೊತ್ತವನ್ನು ನೀಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಜಾರಿ ಮಾಡಲಾದ ಹಲವು ವೆಚ್ಚ ಕಡಿತದ ಕ್ರಮಗಳಿಂದಾಗಿ ಈ ಮೊತ್ತ ನೀಡಲು ಸಾಧ್ಯವಾಯಿತು ಎಂದು ರಾಷ್ಟ್ರಪತಿ ಭವನ ತಿಳಿಸಿದೆ.



Advertisement

Udayavani is now on Telegram. Click here to join our channel and stay updated with the latest news.

Next