ಮಡಿಕೇರಿ: ದಾಖಲೆಯ ಮಳೆ, ಗುಡ್ಡ ಭೂ ಕುಸಿತ, ಪ್ರವಾಹದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಗೆ ಕೇಂದ್ರ ರಕ್ಷಣಾ ಸಚಿವೆ ಮತ್ತು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಶುಕ್ರವಾರ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಸವಿವರಗಳನ್ನು ಪಡೆದಿದ್ದಾರೆ.
ಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ಸಚಿವೆ ಪರಿಹಾರ ಕೇಂದ್ರಗಳಿಗೂ ಭೇಟಿ ನೀಡಿ ಸಂತ್ರಸ್ತರ ಗೋಳು ಆಲಿಸಿದರು.
ಸೋಮವಾರ ಪೇಟೆಯ ಮಾದಾಪುರ ಬಳಿ ಸಚಿವೆ ಅವರು ಹಾನಿ ಪ್ರದೇಶ ವೀಕ್ಷಿಸಿದ್ದು, ಸಂತ್ರಸ್ತರ ಗೋಳು ಆಲಿಸಿದರು.
ನಿರ್ಮಲಾ ಸೀತರಾಮನ್ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ,ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಸೇನಾ ಸಕಲ ನೆರವು
‘ಕೊಡಗಿನ ಹಲವು ರಸ್ತೆಗಳು, ಮನೆಗಳು, ಕಟ್ಟಡಗಳು, ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಪುನಃಸ್ಥಾಪಿಸುವ ಸಲುವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಭಾರತೀಯ ಸೈನ್ಯವು ಇದಕ್ಕೆ ನೆರವಾಗಲಿದೆ. ಏರ್ ಫೋರ್ಸ್ ಕೂಡ ತನ್ನ ಸಹಾಯ ಮಾಡಲಿದೆ’ ಎಂದು ಸಚಿವೆ ಹೇಳಿಕೆ ನೀಡಿದ್ದಾರೆ.
ಕನ್ನಡದಲ್ಲೆ ಮಾತನಾಡಿ !
ಬ್ರಾಹ್ಮಣ ಸಮುದಾಯ ಭವನದಲ್ಲಿದ್ದ ಸಂತ್ರಸ್ತರೊಂದಿಗೆ ಕೆಲ ಹೊತ್ತು ಸಮಸ್ಯೆ ಆಲಿಸಿದ ಸಚಿವೆ ಕನ್ನಡದಲ್ಲಿ ಮಾತನಾಡಿ ನನಗೆ ಅರ್ಥವಾಗುತ್ತದೆ ಎಂದರು. ಸಂತ್ರಸ್ತ ಮಕ್ಕಳೊಂದಿಗೆ ಅವರ ಪಠ್ಯ ಪುಸ್ತಕಗಳನ್ನು ಕೈಗೆತ್ತಿಕೊಂಡು ಕೆಲ ಪ್ರಶ್ನೆಗಳನ್ನು ಕೇಳಿದರು.
ವಿಶೇಷ ಸಭೆ
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಚಿವೆ ನಿರ್ಮಲಾ ಸೀತಾ ರಾಮನ್ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿ ಹಾನಿಯ ವಿವರ ನೀಡಿದ್ದಾರೆ.
ಮತ್ತೆ ಮಳೆ ಆರಂಭ
ಗುರುವಾರ ವಿರಾಮ ನೀಡಿ ರಕ್ಷಣಾ ಕಾರ್ಯ, ಪರಿಹಾರ ಕಾರ್ಯಕ್ಕೆ ನೆರವಾಗಿದ್ದ ಮಳೆ ಇಂದು ಮತ್ತೆ ಆರಂಭವಾಗಿದ್ದು , ಮಂಜು ಮುಸುಕಿದ ವಾತಾವರಣ ಜಿಲ್ಲಾದ್ಯಂತ ಕಂಡು ಬಂದಿದೆ.
ಮಾಧ್ಯಮ ಪ್ರತಿನಿಧಿಗಳ ಆಕ್ರೋಶ
ಸಚಿವರ ಭೇಟಿ ವೇಳೆ ಸ್ಥಳಕ್ಕೆ ತೆರಳದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವುದು ಮಾಧ್ಯಮ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಯಿತು.ಎಸ್‌ಪಿ ಸುಮನ್ ಅವರ ಸೂಚನೆಯ ಮೇರೆಗೆ ಮಾಧ್ಯಮಗಳಿಗೆ ಚಿತ್ರೀಕರಣ ನಡೆಸದಂತೆ ಪೊಲೀಸರು ತಡೆದಿದ್ದಾರೆ ಎಂದು ತಿಳಿದು ಬಂದಿದೆ