ಕೊಡಗು: ದಾಖಲೆಯ ಮಳೆ, ಗುಡ್ಡ ಭೂ ಕುಸಿತ, ಪ್ರವಾಹದಿಂದ ತತ್ತರಿಸಿ ಹೋದ ಕೊಡಗು ಜಿಲ್ಲೆಯ ದುಸ್ಥಿತಿಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ವಿವರಿಸುತ್ತೇನೆ. ಕೇಂದ್ರ ಸರ್ಕಾರ ಜಿಲ್ಲೆಯ ಪುನಃ ನಿರ್ಮಾಣ ಕಾರ್ಯಕ್ಕೆ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶುಕ್ರವಾರ ಕೊಡಗಿನ ನಿರಾಶ್ರಿತರ ಕೇಂದ್ರಗಳು ಮತ್ತು ಗುಡ್ಡ ಕುಸಿತಕ್ಕೀಡಾದ ಸ್ಥಳಗಳ ವೀಕ್ಷಣೆ ನಡೆಸಿದ ಬಳಿಕ ಸಚಿವೆ ಸೀತಾರಾಮನ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿಯನ್ನು ಪಡೆದರು.
ಇದೇ ವೇಳೆ ಸಚಿವೆ ನಿರ್ಮಲಾ ಅವರು ಸಂಸದರ ನಿಧಿಯಿಂದ 1 ಕೋಟಿ ರೂಪಾಯಿ ಮತ್ತು ರಕ್ಷಣಾ ಕಾರ್ಯಕ್ಕಾಗಿ ಇಲಾಖೆಯಿಂದ 7 ಕೋಟಿ ರೂ ನೆರವು ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ನಾನು ಖಂಡಿತವಾಗಿಯೂ ಇಲ್ಲಿ ನೋಡಿದ ದುಸ್ಥಿತಿಯ ನ್ನು ಪ್ರಧಾನ ಮಂತ್ರಿಗಳಿಗೆ ವಿವರಿಸುತ್ತೇನೆ ಮತ್ತು ವರದಿಯನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ.
ರಸ್ತೆಗಳ ದುರಸ್ಥಿಗಾಗಿ ಚರ್ಚಿಸಲು ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗುತ್ತೇನೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ನು ನೋಡಿಕೊಳ್ಳುತ್ತಿರುವ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರನ್ನೂ ಭೇಟಿ ಮಾಡಿ ಮಾತಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೇರಳಕ್ಕೆ ಮಧ್ಯಂತರ ನೆರವು ನೀಡಿದ್ದೇವೆ. ಇನ್ನೂ ಹೆಚ್ಚಿನ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ. ಸೈನ್ಯದ ವತಿಯಿಂದಲೂ ಕೊಡಗಿನ ಪುನಃ ನಿರ್ಮಾಣ ಕಾರ್ಯಕ್ಕೆ ಎಲ್ಲಾ ನೆರವು ನೀಡುವುದಾಗಿ ತಿಳಿಸಿದರು.
10 ಸಾವಿರ ಕೋಟಿ ರೂ ಬೇಡಿಕೆ ಸಲ್ಲಿಸಿದ ಕೆ.ಜಿ.ಬೋಪಯ್ಯ
ಶಾಸಕ ಕೆ.ಜಿ.ಬೋಪಯ್ಯ ಅವರು ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂಪಾಯಿ ನೆರವನ್ನು ರಾಜ್ಯಕ್ಕೆ ನೀಡಬೇಕು ಎಂದು ಮನವಿ ಮಾಡಿದರು.