Advertisement

ಏನಿದು ಆಪರೇಷನ್ ವೆಸ್ಟ್ ಎಂಡ್ ಪ್ರಕರಣ ? ಜಾರ್ಜ್ ರಾಜೀನಾಮೆ, ಜಯಾ ಜೇಟ್ಲಿ ಯಾರು,

05:47 PM Jul 30, 2020 | Nagendra Trasi |

ನವದೆಹಲಿ: ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜಯಾ ಜೇಟ್ಲಿಗೆ ಸಿಬಿಐ ವಿಶೇಷ ನ್ಯಾಯಾಲಯ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ. ಆಪರೇಷನ್ ವೆಸ್ಟ್ ಎಂಡ್ ಹೆಸರಿನ ಮೂಲಕ ಈ ಪ್ರಕರಣ ಬಯಲಾಗಿತ್ತು. ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಯಾರು? ಏನಿದು ಆಪರೇಷನ್ ವೆಸ್ಟ್ ಎಂಡ್ ಎಂಬ ವಿವರಣೆ ಇಲ್ಲಿದೆ…

Advertisement

ಜಯಾ ಜೇಟ್ಲಿ 1942ರ ಜೂನ್ 14ರಂದು ಶಿಮ್ಲಾದಲ್ಲಿ ಜನಿಸಿದ್ದರು. ಇವರ ತಂದೆ ಕೆಕೆ ಚೆಟ್ಟೂರ್ ಕೇರಳ ಮೂಲದವರು. ಜಪಾನ್ ನಲ್ಲಿ ಭಾರತದ ಮೊತ್ತ ಮೊದಲ ರಾಯಭಾರಿಯಾಗಿ ಕಾರ್ಯನಿರ್ವಹಿಸಿದವರು ಚೆಟ್ಟೂರ್. ಜಯಾ ಜೇಟ್ಲಿ ಲೇಖಕಿ, ಸಮತಾ ಪಕ್ಷದ ಮಾಜಿ ಅಧ್ಯಕ್ಷೆ, ಭಾರತೀಯ ಕರಕುಶಲ ವಸ್ತುಗಳ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದರು.

ಜೇಟ್ಲಿ ಜಪಾನ್ ಮತ್ತು ಬರ್ಮಾದಲ್ಲಿ ಬಾಲ್ಯ ಕಳೆದಿದ್ದರು. ಜಯಾ ಅವರಿಗೆ 13 ವರ್ಷವಾಗಿದ್ದ ಸಂದರ್ಭದಲ್ಲಿ ತಂದೆ ವಿಧಿವಶರಾಗಿದ್ದರು. ನಂತರ ತಾಯಿ ಮತ್ತು ಮಗಳು ಭಾರತಕ್ಕೆ ವಾಪಸ್ ಆಗಿದ್ದರು. ದಿಲ್ಲಿಯ ಜೀಸಸ್ ಆ್ಯಂಡ್ ಮೇರಿ ಸ್ಕೂಲ್ ಗೆ ಜಯಾ ಅವರನ್ನು ತಾಯಿ ಸೇರಿಸಿದ್ದರು. ಕಾಲೇಜಿನಲ್ಲಿದ್ದಾಗ ಜಯಾ ಅವರು ಅಶೋಕ್ ಜೇಟ್ಲಿಯನ್ನು ಭೇಟಿಯಾಗಿದ್ದರು. 1965ರಲ್ಲಿ ಜೇಟ್ಲಿ ಅವರನ್ನು ಜಯಾ ವಿವಾಹವಾಗಿದ್ದರು. ದಂಪತಿಗೆ ಅಕ್ಷಯ್ ಮತ್ತು ಅದಿತಿ (ಕ್ರಿಕೆಟಿಗ ಅಜಯ್ ಜಡೇಜಾ ಪತ್ನಿ) ಸೇರಿ ಇಬ್ಬರು ಮಕ್ಕಳು.

ಜಾರ್ಜ್ ಫರ್ನಾಂಡಿಸ್ ಸಖ್ಯ:
ಅಶೋಕ್ ಜೇಟ್ಲಿ ಅಂದು ಜಾರ್ಜ್ ಫರ್ನಾಂಡಿಸ್ ಅವರ ಜತೆ ರಾಜಕೀಯ ಚಟುವಟಿಕೆಯಲ್ಲಿ ಜತೆಯಾಗಿದ್ದರು. ಹೀಗೆ ಜಾರ್ಜ್ ಅವರ ಮನವಿ ಮೇರೆಗೆ ಜಯಾ ಅವರು ಸೋಶಿಯಲ್ ಟ್ರೇಡ್ ಯೂನಿಯನ್ ಗೆ ಸೇರ್ಪಡೆಗೊಂಡಿದ್ದರು.

Advertisement

1984ರ ಸಿಖ್ಖ್ ಗಲಭೆ ಬಳಿಕ ಜಯಾ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿದ್ದರು. ಅಷ್ಟೇ ಅಲ್ಲ ಜಾರ್ಜ್ ಫರ್ನಾಂಡಿಸ್ ಮತ್ತು ಮಧು ಲಿಮಯೆ ತನ್ನ ಮಾರ್ಗದರ್ಶಕರು ಎಂದು ಜಯಾ ಹೇಳಿಕೊಂಡಿದ್ದರು. 1984ರಲ್ಲಿ ಜನತಾ ಪಕ್ಷವನ್ನು ಸೇರಿದ್ದರು. ಆದರೆ ಪಕ್ಷ ಇಬ್ಭಾಗವಾಗುವ ಮೂಲಕ ಜನತಾ ದಳ ಹುಟ್ಟಿಕೊಂಡಿದ್ದರು. ಕೊನೆಗೆ ಜಯಾ ಮತ್ತು ಜಾರ್ಜ್ ಫರ್ನಾಂಡಿಸ್ ಸಮತಾ ಪಕ್ಷವನ್ನು ಸ್ಥಾಪಿಸಿದ್ದರು. ರಾಜಕೀಯ ರಂಗದಲ್ಲಿನ ಸಕ್ರಿಯ ಚಟುವಟಿಕೆ ಹಿನ್ನೆಲೆಯಲ್ಲಿ ಅಶೋಕ್ ಮತ್ತು ಜಯಾ ಜೇಟ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು.

2001ರಲ್ಲಿ ತೆಹಲ್ಕಾ ಪತ್ರಿಕೆ ಆಪರೇಷನ್ ವೆಸ್ಟ್ ಎಂಡ್ ಹೆಸರಿನಲ್ಲಿ ಜಯಾ ಎರಡು ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದನ್ನು ಬಯಲು ಮಾಡಿತ್ತು. 2002ರಲ್ಲಿ ಜಯಾ ಸಮತಾ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಏತನ್ಮಧ್ಯೆ ಜಾರ್ಜ್ ಫರ್ನಾಂಡಿಸ್ ಅವರನ್ನು ಭೇಟಿಯಾಗಲು ಜಯಾಗೆ ಸಂಬಂಧಿಕರು ಅವಕಾಶವನ್ನೇ ನೀಡಿರಲಿಲ್ಲ. ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದ ಜಯಾಗೆ 2012ರಲ್ಲಿ ಜಾರ್ಜ್ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಸಂದರ್ಭದಲ್ಲಿ ಜಾರ್ಜ್ ಅವರು ಅಲ್ಜಮೈರ್ ಗೆ (ಮರೆಗುಳಿ ಕಾಯಿಲೆ) ತುತ್ತಾಗಿದ್ದರು.

ಏನಿದು ಆಪರೇಷನ್ ವೆಸ್ಟ್ ಎಂಡ್ ?
ಅಂದು ತೆಹಲ್ಕಾ ಪತ್ರಿಕೆ ಆಪರೇಷನ್ ವೆಸ್ಟ್ ಎಂಡ್ ಹೆಸರಿನಲ್ಲಿ ಸ್ಟಿಂಗ್ ಆಪರೇಷನ್ ನಡೆಸಿತ್ತು. 2001ರಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅನಾಮಧೇಯ ಕಂಪನಿಗೆ ರಕ್ಷಣಾ ಇಲಾಖೆ ಮೂಲಕ ಇವರೆಲ್ಲರೂ ಒಪ್ಪಂದ ಮಾಡಿಕೊಂಡಿದ್ದರು. ಅದರಲ್ಲಿ ವೆಸ್ಟ್ ಎಂಡ್ ಇಂಟರ್ ನ್ಯಾಷನಲ್ ಕಂಪನಿ ಜಯಾ ಜೇಟ್ಲಿಗೆ ಎರಡು ಲಕ್ಷ ರೂಪಾಯಿ ಲಂಚ ನೀಡಿತ್ತು. ಈ ಬಗ್ಗೆ ಸ್ವತಃ ತೆಹಲ್ಕಾ ಡಾಟ್ ಕಾಮ್ ನ ಪ್ರತಿನಿಧಿ ಸ್ಯಾಮ್ಯುಯೆಲ್ ಹೇಳಿಕೆ ಕೊಟ್ಟಿದ್ದರು. ಇದರ ಪರಿಣಾಮವಾಗಿ ಅಂದು ರಕ್ಷಣಾ ಸಚಿವ ಸ್ಥಾನದಿಂದ ಜಾರ್ಜ್ ಫರ್ನಾಂಡಿಸ್ ಕೆಳಗಿಳಿಯುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next