ಮುಂಬೈ: ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಟ್ರೆಂಡ್ಸ್ ಗಮನಿಸಿದರೆ ರಾಜ್ಯದ ಜನರು ದುರಂಕಾರದ ಅಧಿಕಾರವನ್ನು ಇಷ್ಟಪಟ್ಟಿಲ್ಲ ಎಂಬುದು ಬಹಿರಂಗವಾಗಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದು, ಆಡಳಿತಾರೂಢ ಬಿಜೆಪಿ, ಶಿವಸೇನಾ ಮೈತ್ರಿ ಜಯಗಳಿಸಿದೆ. ಆದರೆ 220 ಸ್ಥಾನಗಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.
ಪಕ್ಷಾಂತರಿಗಳನ್ನು ಜನ ತಿರಸ್ಕರಿಸಿದ್ದಾರೆ, ಕೆಲವೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರಬಹುದು ಎಂದು ಚುನಾವಣೆಗೂ ಮುನ್ನ ಎನ್ ಸಿಪಿ ತೊರೆದು ಬಿಜೆಪಿ, ಶಿವಸೇನಾ ಪಕ್ಷಕ್ಕೆ ಸೇರ್ಪಡೆಗೊಂಡವರ ವಿರುದ್ಧ ಪರೋಕ್ಷವಾಗಿ ಪವಾರ್ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ಜನರು ನಮ್ಮನ್ನು ಮತ್ತೆ ವಿರೋಧ ಪಕ್ಷದಲ್ಲಿಯೇ ಇರುವಂತೆ ಹೇಳಿದ್ದಾರೆ. ಭವಿಷ್ಯದಲ್ಲಿ ಹೊಸ ನಾಯಕತ್ವದ ಬಗ್ಗೆ ನಾವು ಆಲೋಚಿಸಬೇಕಾಗಿದೆ. ಜನರ ತೀರ್ಪಿಗೆ ತಲೆಬಾಗಿ ನಾವು ವಿರೋಧ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಪವಾರ್ ಹೇಳಿದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್ ಸಿಪಿ-ಕಾಂಗ್ರೆಸ್ ಶಿವಸೇನೆಗೆ ಬೆಂಬಲ ನೀಡುವ ಮೂಲಕ ಸರಕಾರ ರಚಿಸಲಿದೆ ಎಂಬ ಊಹಾಪೋಹದ ಬಗ್ಗೆ ಪವಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ 98-100 ಸ್ಥಾನಗಳಲ್ಲಿ, ಶಿವಸೇನಾ 57 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್ ಸಿಪಿ 54, ಕಾಂಗ್ರೆಸ್ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.