ಬೀದರ: ಸ್ಥಳೀಯ ಸಂಸ್ಥೆ ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಿಕೊಟ್ಟ ಕಾಂಗ್ರೆಸ್ ಪಕ್ಷ. ವಿಧಾನ ಪರಿಷತ್ ಚುನಾವಣೆಯಲ್ಲಿ ಹಕ್ಕನ್ನು ಮಾರಿಕೊಂಡು ಕಾಂಗ್ರೆಸ್‌ಗೆ ಸೋಲಿಸಿದರೆ ಸದಸ್ಯ ಮತದಾರರು ತಮ್ಮ ಆತ್ಮಕ್ಕೆ ದ್ರೋಹ ಮಾಡಿದಂತಾಗುತ್ತದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಲ್ಮನೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡಲು ಸ್ಥಳೀಯ ಸಂಸ್ಥೆ ಸದಸ್ಯರಿಗೆ ಮತದಾನ ಮಾಡುವ ಹಕ್ಕು ಕಾಂಗ್ರೆಸ್ ಕೊಡುಗೆಯಾಗಿದೆ. ಈ ಅವಕಾಶ ಕಲ್ಪಿಸಿದ ಕರ್ನಾಟಕ ದೇಶದ ಮೊದಲ ರಾಜ್ಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಸೋಲುಂಡರೆ ಅದಕ್ಕೆ ಮತದಾರರೇ ಕಾರಣ ಹೊರತು ಪಕ್ಷ ಆಗಲ್ಲ ಎಂದು ತಿಳಿಸಿದರು.
ದೇಶದ ವಿವಿಧೆಡೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲಿನ ಕಹಿ ಅನುಭವಿಸುತ್ತಿದ್ದಂತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಕರಾಳ ಕಾನೂನುಗಳು ರೈತ ವರ್ಗಕ್ಕೆ ಮಾರಕವಾಗಿದ್ದರಿಂದ ಜಾರಿಗೊಳಿಸುವುದು ಬೇಡ. ಅದರಲ್ಲಿನ ತಪ್ಪು- ಸರಿ ಬಗ್ಗೆ ಚರ್ಚೆ ಮಾಡೋಣ ಎಂದು ಪರಿ ಪರಿಯಾಗಿ ಕೇಳಿಕೊಂಡರೂ ಕಿವಿಗೊಡದ ಕೇಂದ್ರ ಸರ್ಕಾರ, ಈಗ ಯಾವುದೇ ಚರ್ಚೆ ಇಲ್ಲದ ವಾಪಸ್ ಪಡೆದಿರುವುದು ವಿಚಿತ್ರವಾಗಿದೆ ಎಂದು ವ್ಯಂಗ್ಯವಾಡಿದ ಖರ್ಗೆ, ಬರುವ ದಿನಗಳಲ್ಲಿ ಮಾರಕ ಕಾನೂನುಗಳೆಲ್ಲವೂ ವಾಪಸ್ ಪಡೆಯುತ್ತಾರೆ ಎಂದರು.
ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಜನಪರ ಕಾರ್ಯಕ್ರಮಗಳ ಹೆಸರನ್ನು ಬದಲಾವಣೆ ಮಾಡಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಆದರೆ, ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಏನು ಕೆಲಸ ಮಾಡಿಲ್ಲ ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅವರು (ಬಿಜೆಪಿ) ಏನು ಮಾಡುವುದಿಲ್ಲ, ಬೇರೆಯವರು (ಕಾಂಗ್ರೆಸ್) ಮಾಡಿದ್ದನ್ನು ಸಹಿಸುವುದೂ ಇಲ್ಲ ಎಂದು ಕಿಡಿಕಾರಿದ ಖರ್ಗೆ, ವಿರೋಧ ಪಕ್ಷ ಮತ್ತು ರಾಹುಲ್ ಗಾಂಧಿ ಅವರನ್ನು ಬಯ್ಯುವುದು ಮಾತ್ರ ಸರ್ಕಾರದ ಕೆಲಸ ಎಂದು ಹೇಳಿದರು.
ಸಭೆಯಲ್ಲಿ ಅಭ್ಯರ್ಥಿ ಭೀಮರಾವ್ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ, ರಹೀಮ್ ಖಾನ್, ವಿಜಯಸಿಂಗ್, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ, ಮಾಜಿ ಶಾಸಕರಾದ ಅಶೋಕ ಖೇಣಿ, ಕೆ. ಪುಂಡಲೀಕರಾವ್, ಮಾಜಿ ಸಂಸದರಾದ ಶಿವರಾಮೇಗೌಡ, ನರಸಿಂಗರಾವ್ ಸೂರ್ಯವಂಶಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮೀನಾಕ್ಷಿ ಸಂಗ್ರಾಮ್, ದತ್ತು ಮೂಲಗೆ ಇದ್ದರು.