Advertisement
ಬೆಳಗ್ಗೆ ಟೀ ಅಂಗಡಿ, ಹೋಟೆಲ್, ಗಲ್ಲಿಗಲ್ಲಿಗಳಲ್ಲಿ ಸೇರುವ ನಾಲ್ಕೈದು ಜನರ ಗುಂಪಿನಲ್ಲಿ ಅಭ್ಯರ್ಥಿಗಳ ಸೋಲು, ಗೆಲುವಿನ ಅಂಶಗಳನ್ನು ಮುಂದಿಟ್ಟುಕೊಂಡು ಪರ ವಿರೋಧ ಚರ್ಚೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.
Related Articles
Advertisement
ಮೇ 23ರಂದು ಮತ ಎಣಿಕೆ ಇರುವುದರಿಂದ ಈಗಿನಿಂದಲೇ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಲೋಕಸಭಾ ಚುನಾವಣೆ ಅಧಿಸೂಚನೆ ಹೊರಬಿದ್ದು ಮತದಾನ ನಡೆಯುವವರೆಗೂ ಕ್ಷಣ ಕ್ಷಣಕ್ಕೂ ಒಂದು ರೀತಿಯ ನಾಟಕೀಯ, ರಾಜಕೀಯ ಸನ್ನಿವೇಶಗಳು ಸಾಕ್ಷಿಯಾಗಿದ್ದವು.
ಇದೀಗ ಯಾರು ಬರುತ್ತಾರೆ, ಯಾರು ಸೋಲುತ್ತಾರೆಂಬುದೇ ಜನರ ಕುತೂಹಲದ ಪ್ರಶ್ನೆಯಾಗಿದೆ. ಪ್ರಬಲ ಹೋರಾಟ ನಡೆಸಿದ ಅಭ್ಯರ್ಥಿಗಳಿಗೆ ತಮ್ಮ ಭವಿಷ್ಯದ ರಾಜಕೀಯದ ಹಿತದೃಷ್ಟಿಯಿಂದ ಮಹಾ ಸಮರದ ಫಲಿತಾಂಶ ಮಹತ್ವದ್ದಾಗಿದ್ದರೆ, ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಬೆವರು ಸುರಿಸಿ ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಫಲಿತಾಂಶ ಒಂದು ರೀತಿಯ ಪ್ರತಿಷ್ಠೆಯಾಗಿದೆ.
ಗುಂಪು ಚರ್ಚೆ: ಅಖಾಡದಲ್ಲಿರುವ ಸಿಪಿಎಂ, ಬಹುಜನ ಸಮಾಜ ಪಾಟಿ, ಕೆಜೆಪಿ ಸೇರಿದಂತೆ 12 ಮಂದಿ ಪಕ್ಷೇತರರು ಯಾರ ಗೆಲುವಿಗೆ ಅಡ್ಡಗಾಲಾಗುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳೂ ಶುರುವಾಗಿವೆ. ರಾಜಕೀಯ ಪಕ್ಷಗಳು ಯಾವ್ಯಾವ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆಯುವ ಮತಗಳ ಬಗ್ಗೆ ಈಗಾಗಲೇ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗುಂಪು ಚರ್ಚೆಗಳು ಶುರುವಾಗಿವೆ.
ಮೊಯ್ಲಿಗೆ ಹ್ಯಾಟ್ರಿಕ್ ಗೆಲುವು?: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿ.ಕೃಷ್ಣರಾವ್ ಮತ್ತು ಆರ್.ಎಲ್.ಜಾಲಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸತತ ಮೂರು ಬಾರಿ ಹ್ಯಾಟ್ರಿಕ್ ಬಾರಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎರಡು ಬಾರಿ ಗೆಲುವು ಸಾಧಿಸಿರುವ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಈ ಬಾರಿ ಹ್ಯಾಟ್ರಿಕ್ ಸಾಧಿಸಬಲ್ಲರೇ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ.
ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಯಾವುದೇ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಒಕ್ಕಲಿಗರಿಗಿಂತ ಹೆಚ್ಚು ಸಂಖ್ಯೆಯಲ್ಲಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ಗೆ ಸಾಂಪ್ರಾದಾಯಿಕ ಮತಗಳಾಗಿರುವುದರಿಂದ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ವೀರಪ್ಪ ಮೊಯ್ಲಿ ಅವರು ಸುಲಭವಾಗಿ ಗೆಲ್ಲಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಧಾನಿ ಮೋದಿ ಅಲೆ ವಿಶ್ವಾಸ: ಇನ್ನು ಕಳೆದ 2014ರ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಈ ಬಾರಿ ಒಕ್ಕಲಿಗರ ಕ್ಷೇತ್ರದಲ್ಲಿ ಸ್ವಸಮುದಾಯದ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಒಕ್ಕಲಿಗರ ಮತಗಳು ವಿಭಜನೆಯಾಗಿ ಸೋಲು ಅನುಭವಿಸಬೇಕಾಗಿತ್ತು.
ಲೋಕಸಭಾ ಕ್ಷೇತ್ರದ ಇತಿಹಾಸವನ್ನು ಒಮ್ಮೆ ದಿಟ್ಟಿಸಿ ನೋಡಿದರೆ ಇಲ್ಲಿ ಕಮಲ ಅರಳಿದ ಉದಾಹರಣೆಗಳು ಸಿಗುವುದಿಲ್ಲ. ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳುತ್ತದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಪ್ರಧಾನಿ ಮೋದಿ ಅಲೆ ಹಾಗೂ ಕಳೆದ ಬಾರಿ ಸೋತ ಅನುಕಂಪ ನನ್ನ ಕೈ ಹಿಡಿಯುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ಬಿ.ಎನ್.ಬಚ್ಚೇಗೌಡ ಇದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಗೆಲುವಿಗೆ ನಿರ್ಣಾಯಕವಾಗಿರುವುದರಿಂದ ಈ ಬಾರಿ ಗೆಲುವು ಖಚಿತ ಎಂಬುದು ಅವರ ನಂಬಿಗೆಯಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮತದಾರ ಪ್ರಭುಗಳು ನೀಡಿರುವ ತೀರ್ಪು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ. ಯಾವ ಅಭ್ಯರ್ಥಿ ಜಯದ ಮಾಲೆ ಧರಿಸುತ್ತಾರೆಂಬುದು ಮೇ 23 ರಂದು ಖಚಿತವಾಗಲಿದೆ. ಅಲ್ಲಿಯವರೆಗೂ ಸೋಲು, ಗೆಲುವಿನ ಲೆಕ್ಕಾಚಾರಗಳು ಮಾತ್ರ ಸಾರ್ವಜನಿಕ ವಲಯದಲ್ಲಿ ಸರ್ವೇ ಸಾಮಾನ್ಯ ಎನ್ನಬಹುದಾಗಿದೆ. ಹಾಗಾಗಿ, ಮತದಾರರು ಮತ ಎಣಿಕೆಗೆ ಕಾತುರದಿಂದ ಕಾಯುತ್ತಿದ್ದಾರೆ.
* ಎಸ್.ಮಹೇಶ್