ಮಂಗಳೂರು, ಜ. 4: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ ಮತ್ತು ಡೆವಲಪ್ಪರ್ ಮಾಲಕ ಕೆ. ಶ್ರೀನಾಥ್ ಹೆಬ್ಬಾರ್ ಅವರ ವಿರುದ್ಧ ಲೇಖನ ಬರೆದು ಮಾನನಷ್ಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಹನುಮಂತ ಕಾಮತ್ ಮತ್ತು ವೆಬ್ ನ್ಯೂಸ್ ಪೋರ್ಟಲ್ ಮೇ| ತುಳುನಾಡು ನ್ಯೂಸ್ ವಿರುದ್ಧ ಮಂಗಳೂರು ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದ್ದು, 1.5 ಕೋ. ರೂ. ಮಾನನಷ್ಟ ಮೊತ್ತ ವನ್ನು 6 ತಿಂಗಳಿನೊಳಗೆ 2 ಕಂತಿನಲ್ಲಿ ಪಾವತಿಸುವಂತೆ ಆದೇಶ ಹೊರಡಿಸಿದೆ.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಮುಂದಿನ ದಿನಗಳಲ್ಲಿ ಯಾವುದೇ ಮಾನನಷ್ಟ ಮಾಡುವ ರೀತಿಯಲ್ಲಿ ಮಾನಹಾನಿಕರ, ಸುಳ್ಳು, ದುರುದ್ದೇಶಪೂರಿತ ಲೇಖನ, ಹೇಳಿಕೆ ನೀಡದಂತೆ ಶಾಶ್ವತ ತಡೆಯಾಜ್ಞೆ ನೀಡಿದೆ. ಮಾನನಷ್ಟ ಮೊತ್ತದ ಶೇ. 95ರಷ್ಟನ್ನು ಪ್ರಥಮ ಪ್ರತಿವಾದಿ ಹನುಮಂತ ಕಾಮತ್ ಹಾಗೂ ಉಳಿದ ಶೇ. 5ರಷ್ಟು ಮೊತ್ತವನ್ನು ಎರಡನೇ ಪ್ರತಿವಾದಿ ಮೇ| ತುಳುನಾಡು ನ್ಯೂಸ್ ಅವರು ಪರಿಹಾರದ ರೂಪದಲ್ಲಿ ಪಾವತಿಸಬೇಕು ಎಂದು 2021ರ ನ. 29ರಂದು ಮಂಗಳೂರು ಸಿಜೆಎಂ ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಧರ್ಮಗಿರಿ ರಾಮಸ್ವಾಮಿ ಅವರು ಆದೇಶ ನೀಡಿದ್ದಾರೆ.
ಹನುಮಂತ ಕಾಮತ್ ಅವರು ತುಳುನಾಡು ನ್ಯೂಸ್ ವೆಬ್‌ಪೋರ್ಟಲ್ ನಲ್ಲಿ ಕೆ. ಶ್ರೀನಾಥ್ ಹೆಬ್ಟಾರ್ ಅವರ ಚಿಲಿಂಬಿಯ ಹ್ಯಾಟ್‌ಹಿಲ್‌ನಲ್ಲಿರುವ ವಸತಿ ಸಮುಚ್ಚಯ ಸಾಲಿಟೇರ್‌ನ ವಿರುದ್ಧ ಸರಣಿ ಲೇಖನವನ್ನು ಪ್ರಕಟಿಸಿದ್ದರು. ಈ ಲೇಖನವು ದುರುದ್ದೇಶ ಪೂರಿತವಾಗಿದ್ದು, ಮಾನಹಾನಿಕರ ಸ್ವರೂಪದಿಂದ ಕೂಡಿದೆ. ಲೇಖನಗಳು ತನ್ನ ಪ್ರತಿಷ್ಠೆಗೆ ಧಕ್ಕೆ ತಂದಿದ್ದು, ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ. ವಸತಿ ಸಮುಚ್ಚಯದ ಮಾರಾಟದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಈ ಲೇಖನದಿಂದಾಗಿ ಸುಮಾರು 2 ಕೋಟಿ ರೂ. ನಷ್ಟವಾಗಿದೆ ಎಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿ, ಈ ಸಂಬಂಧ ಪ್ರತಿವಾದಿಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ಮತ್ತು ನಗದು ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಶ್ರೀನಾಥ್ ಹೆಬ್ಬಾರ್ ಅವರು ನ್ಯಾಯಾಲಯಕ್ಕೆ ಕಟ್ಟಡ ನಿರ್ಮಾಣ ಪರವಾನಿಗೆ, ಮನಪಾದಿಂದ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಾಕ್ಷೇಪಣ ಪ್ರಮಾಣಪತ್ರ, ಪೊಲೀಸ್ ಮಹಾನಿರ್ದೇಶಕರಿಂದ ಅಂತಿಮ ಅನುಮತಿ ಪತ್ರ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ, ಸಂಬಂಧಿತ ಬ್ಯಾಂಕ್ ದಾಖಲೆಗಳು ಸೇರಿದಂತೆ 35ಕ್ಕೂ ಅಧಿಕ ದಾಖಲೆಗಳನ್ನು ಸಲ್ಲಿಸಿದ್ದರು. ಸ್ಥಳೀಯ ಅತೃಪ್ತ ವ್ಯಕ್ತಿಗಳೊಂದಿಗೆ ಶಾಮೀಲಾಗಿ, ದುರುದ್ದೇಶದಿಂದ ಸಂಸ್ಥೆಯ ಮತ್ತು ವೈಯಕ್ತಿಕ ವಿಶ್ವಾಸಾರ್ಹತೆಯನ್ನು ಹಾಳು ಮಾಡಲು ಪ್ರತಿವಾದಿ ಹನುಮಂತ ಕಾಮತ್ ಪ್ರಯತ್ನಿಸಿದ್ದಾರೆ ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಅರ್ಜಿದಾರರ ಪರವಾಗಿ ನ್ಯಾಯಾ ಲಯದಲ್ಲಿ ವಕೀಲ ಕೆ. ಶಂಭು ಶರ್ಮಾ ವಾದ ಮಾಡಿದ್ದರು.