ಸೂರತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ಪೂರ್ಣಗೊಂಡಿದ್ದು, ಗುಜರಾತ್‌ನ ಸೂರತ್ ನ್ಯಾಯಾಲಯ ಮಾ.23ರಂದು ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ಈ ಸಮಯದಲ್ಲಿ ಖುದ್ದು ಹಾಜರಿರುವಂತೆ ರಾಹುಲ್ ಅವರಿಗೆ ನ್ಯಾಯಾಲಯ ಸೂಚಿಸಿದೆ. 2019ರ ಲೋಕಸಭೆ ಚುನಾವಣೆ ನಿಮಿತ್ತ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, “ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ?’ ಎಂದು ಪ್ರಶ್ನಿಸಿದ್ದರು.
ವಯನಾಡ್ ಸಂಸದರು ತಮ್ಮ ಹೇಳಿಕೆ ಮೂಲಕ “ಮೋದಿ’ ಉಪನಾಮ ಹೊಂದಿರುವವರೆಲ್ಲರನ್ನು ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.