ಸಿಂಧನೂರು: ರಾಯಚೂರು ಹಾಗೂ ಕೊಪ್ಪಳ ಅವಳಿ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆ ನೀರನ್ನು ಅಕ್ರಮವಾಗಿ ಬಳಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಕಮ್ಮವಾರಿ ಭವನದಲ್ಲಿ ಕೊಪ್ಪಳ ಹಾಗೂ ರಾಯಚೂರು ಅವಳಿ ಜಿಲ್ಲೆಗಳ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಬಿಡುವ ವಿಚಾರವಾಗಿ ಶನಿವಾರ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಕಳೆದ ವರ್ಷದಿಂದ ಎಡದಂಡೆ ನಾಲೆಯ ನೀರನ್ನು ಅನಧಿಕೃತವಾಗಿ ಬಳಕೆ ಕುರಿತಂತೆ ಮುಖ್ಯಮಂತ್ರಿಗಳ ಆದೇಶ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಆದೇಶದಂತೆ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಡದಂಡೆ ನಾಲೆಯಿಂದ ಯಾರಾದರೂ ಅಕ್ರಮವಾಗಿ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿ ಗ್ರಾಮ ಮಟ್ಟದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಎಲ್ಲೆಲ್ಲಿ ನಾಲೆಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಕೆ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆರ ಮಾಹಿತಿ ಒದಗಿಸಬೇಕು ಎಂದರು.
ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ಮಾತನಾಡಿ, ರೈತರು ಭತ್ತದ ಬದಲಿಗೆ ಇತರೆ ಬೆಳೆ ಬೆಳೆಯಲು ಮುಂದಾಗಬೇಕು. ಕೊಪ್ಪಳ ಜಿಲ್ಲೆಯಲ್ಲಿ ಅತೀ ಹೆಚ್ಚು ರೈಸ್ ಮಿಲ್ ಗಳಿವೆ. ಈ ರೈಸ್ ಮಿಲ್‌ಗಳ ತ್ಯಾಜ್ಯವನ್ನು ಯಾವುದೇ ಕಾರಣಕ್ಕೂ ನದಿ ಹಾಗೂ ಕಾಲುವೆಗಳಿಗೆ ಬಿಡಬಾರದು. ಅಕ್ರಮವಾಗಿ ನೀರು ಬಳಸುವವರ ಬಗ್ಗೆ ಮಾಹಿತಿ ಇದ್ದರೆ ಜನತೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಮಾತನಾಡಿ, ರೈತರು ಯಾವುದೇ ಕಾರಣಕ್ಕೂ ನೀರಿನ ವಿಚಾರದಲ್ಲಿ ಗುಂಪುಗಾರಿಕೆ ಮಾಡಬಾರದು. ಅಕ್ರಮ ನೀರು ಬಳಕೆದಾರರ ಮೇಲೆ ಸೂಕ್ತ ಕ್ರಮಜರುಗಿಸಲಾಗುವುದು ಎಂದರು. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸೇರಿದಂತೆ ಅವಳಿ ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕಾಲುವೆಗೆ ಅನಧಿಕೃತವಾಗಿ ಪಂಪ್‌ಸೆಟ್ ಅಳವಡಿಸಿ 2 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಇದರಿಂದ ಸಿರವಾರ ಹಾಗೂ ಯರಮರಸ್ ಕೆಳಭಾಗದ ರೈತರ ಜಮೀನುಗಳಿಗೆ ಸರಿಯಾಗಿ ನೀರು ದೊರಕುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಅನಧಿಕೃತ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಿ ಕೆಳಭಾಗದ ರೈತರ ಜಮೀನುಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು. –
ಚಾಮರಸ ಪಾಟೀಲ, ರೈತ ಮುಖಂಡ