Advertisement

ಜಿಂಕೆ ಮರಿಯ ಉಪಾಯ

12:30 AM Feb 21, 2019 | |

ಅದು ದೊಡ್ಡ ಕಾಡು. ಕಾಡಿನಲ್ಲಿ ರಾಜಾರೋಷದಿಂದ ಮೆರೆಯುತ್ತಿದ್ದ ಹುಲಿರಾಯನಿಗೆ ವಯಸ್ಸಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಅದ್ದರಿಂದ ಅದು ನರಿಯನ್ನು ಕರೆದು “ನರಿರಾಯ ನನಗೆ ವಯಸ್ಸಾಗಿರುವ ಕಾರಣ ಬೇಟೆಯಾಡಲು ಆಗುತ್ತಿಲ್ಲ. ನೀನು ನನ್ನೊಡನೆ ಮಂತ್ರಿಯಾಗಿ ದಿನವೂ ಒಂದೊಂದು ಪ್ರಾಣಿಯನ್ನು ಆಹಾರವಾಗಿ ತಂದು ಕೊಡು’ ಎಂದು ಹೇಳಿತು. ನರಿ ಹುಲಿರಾಯ ತಿಂದು ಬಿಟ್ಟ ಆಹಾರ ತನಗೆ ಸಿಗುವುದು ಎಂದು ಯೋಚಿಸಿ ಹುಲಿರಾಯನ ಮಾತಿಗೆ ಒಪ್ಪಿತು.

Advertisement

ಮರುದಿನ ನರಿ ಆಹಾರ ತರಲು ಹೊರಟಿತು. ಹುಲಿರಾಯ ಗುಹೆ ಹೊರಗಡೆ ಬಿಸಿಲಿಗೆ ಮೈಕಾಯಿಸುತ್ತಾ ಮಲಗಿತ್ತು. ನರಿ, ಕಾಡಿನ ಸುತ್ತಮುತ್ತ ಬೇಟೆಯನ್ನು ಹುಡುಕುತ್ತಾ ಹೋಯಿತು. ದೂರದಿಂದ ಜಿಂಕೆ ಮರಿಯೊಂದು ಬರುವುದನ್ನು ಕಂಡು ನರಿಯಣ್ಣನಿಗೆ ಸಂತಸವಾಯಿತು. ಅದು ಉಪಾಯದಿಂದ ಜಿಂಕೆ ಬಲಿ ಹೋಗಿ “ನಿನ್ನನ್ನು ಹುಲಿರಾಯ ಕರೆಯುತ್ತಿದ್ದಾನೆ. ನಿನ್ನೊಂದಿಗೆ ಮುಖ್ಯವಾದ ವಿಚಾರ ಮಾತಾಡಬೇಕಂತೆ’ ಎಂದು ನರಿ ಕರೆಯಿತು. ಜಿಂಕೆಗೆ ನರಿಯ ಮಾತಿನ ಮೇಲೆ ನಂಬಿಕೆ ಬರಲಿಲ್ಲ. 

ಅದು “ಇಲ್ಲ. ನನಗೆ ಹುಲಿರಾಯನನ್ನು ನೋಡಿದರೆ ಭಯ. ಆದ್ದರಿಂದ ಬರುವುದಿಲ್ಲ’ ಎಂದು ದೂರದಿಂದಲೇ ಹೇಳಿತು. ಆ ದಿನ ನರಿಗೆ ಬೇಟೆ ಸಿಗಲಿಲ್ಲ. ಹುಲಿರಾಯನಿಗೆ ಹಸಿವು ತಾಳಲಾಗಲಿಲ್ಲ. ಮರುದಿನ ತಪ್ಪಿಸಿಕೊಂಡಿದ್ದ ಜಿಂಕೆಯನ್ನು ಈ ಬಾರಿ ಹಿಡಿದೇ ತೀರಬೇಕೆಂದು ನರಿ ಒಂದು ಉಪಾಯ ಮಾಡಿತು. ಹುಲಿರಾಯನನ್ನು ಮರದ ಕೆಳಗೆ ಮಲಗಿಸಿ ಅದರ ಮೇಲೆ ಹೂಗಳನ್ನು ಹಾಕಿ, ಅತ್ತ ಜಿಂಕೆ ಬಂದಾಗ ಸತ್ತ ಹಾಗೆ ನಟಿಸುವಂತೆ ಕೇಳಿಕೊಂಡಿತು. ಇತ್ತ ಜಿಂಕೆ ಮರಿ ಕಣ್ಣಿಗೆ ಬಿದ್ದಾಗ ನರಿಯು ಅದರ ಬಳಿ ಹೋಗಿ “ಹುಲಿರಾಯ ಸತ್ತು ಹೋದ. ನಿನ್ನನ್ನು ಕೊನೆಯ ಬಾರಿ ನೋಡುವ ಆಸೆ ಅವನಿಗಿತ್ತು. ಈಗಲಾದರೂ ಅಂತಿಮ ದರ್ಶನ ಮಾಡಿ ಬಾ’ ಎಂದು ಜಿಂಕೆಯನ್ನು ನಂಬಿಸಿ ಕರೆದೊಯ್ಯಿತು. 

ಜಿಂಕೆ ಮಲಗಿದ್ದ ಹುಲಿರಾಯನನ್ನು ದಿಟ್ಟಿಸಿ ನೋಡುತ್ತಾ “ಅಯ್ಯೋ ನರಿಯಣ್ಣ. ಹುಲಿರಾಯ ಸತ್ತಾಗ ಬಾಲ ಅಲ್ಲಾಡುತಲಿರುತ್ತದೆ ಎಂದು ನಮ್ಮಜ್ಜ ಹೇಳಿದ ನೆನಪು. ಆದರೆ ಇಲ್ಲಿ ಹುಲಿರಾಯನ ಬಾಲ ತಟಸ್ಥವಾಗಿದೆಯಲ್ಲ?!’ ಎಂದಿತು. ಈ ಮಾತನ್ನು ಕೇಳಿದ ತಕ್ಷಣ ಹುಲಿರಾಯ ಬಾಲ ಅಲುಗಾಡಿಸಿಬಿಟ್ಟಿತು. ಒಡನೆಯೇ ಜಿಂಕೆ ಮರಿ ಅಲ್ಲಿಂದ ಪರಾರಿಯಾಯಿತು.

ಗಾಯತ್ರಿ 
 

Advertisement
Advertisement

Udayavani is now on Telegram. Click here to join our channel and stay updated with the latest news.

Next