ಅದೊಂದು ಕಾಡು. ಆ ಕಾಡಿನಲ್ಲಿ ನದಿಯೊಂದು ಹರಿಯುತ್ತಿತ್ತು. ಅಲ್ಲಿನ ಪ್ರಾಣಿಗಳಿಗೆಲ್ಲಾ ಅದುವೇ ನೀರಿನ ಮೂಲ. ಸಸ್ಯಾಹಾರಿ, ಮಾಂಸಾಹಾರಿ ಪ್ರಾಣಿಗಳೆಲ್ಲವೂ ಒಂದೇ ಸಮಯಕ್ಕೆ ಅಲ್ಲಿಗೆ ನೀರು ಕುಡಿಯಲು ಬರುತ್ತಿದ್ದವು. ಆಗ ಮಾಂಸಾಹಾರಿ ಪ್ರಾಣಿಗಳು ಸಸ್ಯಾಹಾರಿ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದವು.
ಕ್ರಮೇಣ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗತೊಡಗಿತು. ಅಳಿದುಳಿದ ಪ್ರಾಣಿಗಳು ತಮ್ಮ ಉಳಿವಿಗಾಗಿ ಒಂದೆಡೆ ಸೇರಿ ಚರ್ಚಿಸತೊಡಗಿದವು. ಆಗ ಜಾಣ ಜಿಂಕೆಯೊಂದು ಹೀಗೆ ಹೇಳಿತು – “ಇನ್ಮುಂದೆ ನಾವಿಲ್ಲಿ ನೀರು ಕುಡಿಯುವುದೇ ಬೇಡ. ಹೇಗೂ ಈ ನದಿಯು ಕಾಡಿನ ಅಂಚಿನವರೆಗೂ ಹರಿಯುತ್ತದೆ. ನಾವು ಅಲ್ಲಿ ಹೋಗಿ ನೀರು ಕುಡಿಯೋಣ’.
ಜಿಂಕೆಯ ಮಾತಿಗೆ ಉಳಿದ ಪ್ರಾಣಿಗಳೂ ಒಪ್ಪಿದವು. ಎಲ್ಲವೂ ನದಿಯ ಅಂಚಿಗೆ ಬಂದು ನೀರು ಕುಡಿಯತೊಡಗಿದವು. ಸ್ವಲ್ಪ ದಿನಗಳ ನಂತರ ಅಲ್ಲಿ ಬೇಟೆಗಾರರ ಹಾವಳಿ ಶುರುವಾಯ್ತು. ಅದುವರೆಗೂ ಕಾಡಿನ ಮಧ್ಯದವರೆಗೆ ಬೇಟೆಗಾರರು ಬರುತ್ತಿರಲಿಲ್ಲ. ಆದರೀಗ ಕಾಡಿನಂಚಿಗೆ ಬಂದ ಪ್ರಾಣಿಗಳನ್ನು ಅವರು ಬೇಟೆಯಾಡತೊಡಗಿದರು. ಇದರಿಂದ ಸಸ್ಯಾಹಾರಿ ಪ್ರಾಣಿಗಳಿಗೆ ಮತ್ತಷ್ಟು ತೊಂದರೆಯಾಗತೊಡಗಿತು.
ಆಗ ಜಿಂಕೆಯು ಮತ್ತೂಂದು ಉಪಾಯ ಮಾಡಿತು. “ನಾವು ಮೊದಲಿನ ಸ್ಥಳದಲ್ಲಿಯೇ ನೀರು ಕುಡಿಯೋಣ. ಮಾಂಸಾಹಾರಿ ಪ್ರಾಣಿಗಳಿಗೆ ಬೆದರಿ ಅಲ್ಲಿಗೆ ಬೇಟೆಗಾರರು ಬರುವುದಿಲ್ಲ. ಆದರೆ ಇನ್ಮುಂದೆ ಮಾಂಸಾಹಾರಿ ಪ್ರಾಣಿಗಳು ನೀರು ಕುಡಿದು ಹೋದ ನಂತರ, ಸಮಯ ನೋಡಿಕೊಂಡು ನಾವು ಅಲ್ಲಿಗೆ ಹೋಗೋಣ.
ಅದನ್ನು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ’ ಎಂದಿತು ಜಿಂಕೆ. ಇದು ಎಲ್ಲಾ ಪ್ರಾಣಿಗಳಿಗೂ ಸರಿ ಎನಿಸಿತು. ಜಿಂಕೆಯ ಮಾತನ್ನು ಎಲ್ಲ ಸಸ್ಯಾಹಾರಿ ಪ್ರಾಣಿಗಳೂ ಪಾಲಿಸತೊಡಗಿದವು. ಅಂದಿನಿಂದ ಮಾಂಸಾಹಾರಿ ಪ್ರಾಣಿಗಳಿಗೆ ಸಸ್ಯಾಹಾರಿ ಪ್ರಾಣಿಗಳು ಬಲಿಯಾಗುವುದು ಕಡಿಮೆಯಾಗತೊಡಗಿತು.
* ರಾಜಕುಮಾರ ಭೀ. ವಗ್ಯಾನವರ, ಬಾದಾಮಿ