ಒಂದು ಕಾಡಿನಲ್ಲಿ ಜಿಂಕೆಗಳು ಒಗ್ಗಟ್ಟಾಗಿ ಬಾಳ್ವೆ ನಡೆಸುತ್ತಿದ್ದವು. ಆ ಕಾಡಿನಲ್ಲಿ ಹುಲಿ ಸಿಂಹಗಳಿರಲಿಲ್ಲ. ಹೀಗೆಂದು ಜಿಂಕೆಗಳು ಸುಖವಾಗಿದ್ದವು ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಅವುಗಳಿಗಿದ್ದ ಒಂದೇ ಭಯವೆಂದರೆ ಬೇಟೆಗಾರರದು. ಕಾಡಿನಲ್ಲಿ ಅಪಾಯಕಾರಿ ಮಾಂಸಾಹಾರಿ ಪ್ರಾಣಿಗಳು ಕಡಿಮೆ ಸಂಖ್ಯೆಯಲ್ಲಿದ್ದುದರಿಂದ ಬೇಟೆಗಾರರ ಹಾವಳಿ ತುಂಬಾ ಇತ್ತು. ಅವರು ಮನಸ್ಸು ಬಂದಾಗಲೆಲ್ಲಾ ಕಾಡಿಗೆ ನುಗ್ಗಿ ಜಿಂಕೆಗಳನ್ನು ಬೇಟೆಯಾಡುತ್ತಿದ್ದರು. ಹೀಗಾಗಿ ಯಾವಾಗಲೂ ಎಚ್ಚರಿಕೆಯಿಂದಲೇ ಇರಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು.
ಜಿಂಕೆಗಳ ಸಮೂಹದಲ್ಲಿ ಒಂದು ಹಿರಿಯ ಹೆಣ್ಣು ಜಿಂಕೆಯಿತ್ತು. ಸಮಸ್ಯೆ ಎದುರಾದಾಗ ಎಲ್ಲಾ ಜಿಂಕೆಗಳು ಪರಿಹಾರ ಕೇಳಲು ಅದರ ಬಳಿಗೆ ತೆರಳುತ್ತಿದ್ದವು. ಎಂಥಾ ಸಮಸ್ಯೆ ಬಂದರೂ ಹಿರಿಯ ಜಿಂಕೆ ಪರಿಹಾರ ನೀಡುತ್ತಿತ್ತು. ಒಮ್ಮೆ ಬೇಟೆಗಾರರ ತಂಡ ದಿಢೀರನೆ ಭೀಕರ ಕಾಡಿಗೆ ನುಗ್ಗಿಯೇ ಬಿಟ್ಟಿತು. ಅವರ ಬಳಿ ಬಿಲ್ಲು, ಬಾಣ, ಭರ್ಜಿ, ಬಲೆ ಇನ್ನೂ ಅನೇಕ ಆಯುಧಗಳಿದ್ದವು. ಪ್ರತಿ ಸಾರಿ ಜಿಂಕೆಗಳು ತಮ್ಮ ಕೈತಪ್ಪಿ ಹೋಗುವುದಕ್ಕೆ ಹಿರಿಯ ಜಿಂಕೆ ಕಾರಣವೆನ್ನುವುದು ಬೇಟೆಗಾರರಿಗೆ ತಿಳಿದುಹೋಗಿತ್ತು. ಹೀಗಾಗಿ ಈ ಬಾರಿ ಹಿರಿಯ ಜಿಂಕೆಯನ್ನು ಹಿಡಿಯಲೆಂದೇ ತಯಾರಾಗಿ ಬಂದಿದ್ದರು.
ಇತರೆ ಜಿಂಕೆಗಳನ್ನೆಲ್ಲಾ ದೂರ ಓಡಿಸಿದ ಬೇಟೆಗಾರರು ಹಿರಿಯ ಜಿಂಕೆಯಿದ್ದ ಜಾಗದ ಸುತ್ತಲೂ ಬೆಂಕಿ ಹಾಕಿದರು. ಜಿಂಕೆಗೆ ಏನು ಮಾಡುವುದೆಂದು ತೋಚಲಿಲ್ಲ. ಅದನ್ನು ಬೆಂಕಿ ಅವರಿಸಿತ್ತು. ಕ್ಷಣಕ್ಷಣಕ್ಕೂ ಬೆಂಕಿಯ ಕೆನ್ನಾಲಗೆ ಜಿಂಕೆಯ ಬಳಿ ಬರತೊಡಗಿತ್ತು. ಅದು ಭಯದಿಂದ ತತ್ತರಿಸಿ ಹೋಯಿತು. ಇತರೆ ಜಿಂಕೆಗಳು ಏನು ಮಾಡುವ ಹಾಗಿರಲಿಲ್ಲ. ಹಿರಿಯ ಜಿಂಕೆ ಅಲ್ಲೇ ಇದ್ದರೆ ಸಾಯುವುದು ಖಚಿತವಾಗಿತ್ತು. ಅದೇನಾದರೂ ಬೆಂಕಿಯನ್ನು ಹಾರಿ ಬಂದರೆ ಹಿಡಿಯಲು ಬೇಟೆಗಾರರು ಸಿದ್ಧವಾಗಿದ್ದರು. ಹೀಗಾಗಿ ಏನು ಮಾಡಿದರೂ ಹಿರಿಯ ಜಿಂಕೆ ಸಿಕ್ಕಿಕೊಳ್ಳುವುದು ಖಚಿತವಾಗಿತ್ತು.
ಹಿರಿಯ ಜಿಂಕೆಯ ಮೈಚರ್ಮ ಸುಡತೊಡಗಿತು. ಅದರ ನೋವಿನಿಂದ ತಪ್ಪಿಸಿಕೊಳ್ಳಲು ಅದು ಬೆಂಕಿಯನ್ನು ಹಾರಿ ಬಂದಿತು. ಇನ್ನೇನು ಬೇಟೆಗಾರರ ಕೈಗೆ ಸಿಕ್ಕಿಬಿಟ್ಟಿತು ಎನ್ನುವಷ್ಟರಲ್ಲಿ ಘರ್ಜನೆಯೊಂದು ಕೇಳಿಸಿತು. ಬೇಟೆಗಾರರು ಆ ಸದ್ದು ಕೇಳಿ ಭಯದಿಂದ ನಡುಗಿದರು. ಏಕೆಂದರೆ ಅದು ಅವರಿಗೆ ತುಂಬಾ ಪರಿಚಿತವಾಗಿದ್ದ ಸಿಂಹದ ಘರ್ಜನೆಯಾಗಿತ್ತು. ಇಷ್ಟು ದಿನ ಇಲ್ಲದಿದ್ದ ಸಿಂಹ ಈಗ ಹೇಗೆ ಬಂತು ಎಂದು ಅವರಿಗೆ ತಿಳಿಯಲಿಲ್ಲ. ಬೇಟೆಗಾರರು ಅಲ್ಲಿಂದ ಜಾಗ ಖಾಲಿ ಮಾಡಿದರು. ಇನ್ನೆಂದೂ ಕಾಡಿಗೆ ಬರಲಿಲ್ಲ.
ಬೇಟೆಗಾರರು ಜಿಂಕೆಯನ್ನು ಹಿಡಿಯಲು ಹಾಕಿದ ಬೆಂಕಿಯಿಂದಾಗಿ ದಟ್ಟ ಹೊಗೆ ಆಕಾಶ ಮುಟ್ಟಿತ್ತು. ಪಕ್ಕದ ಕಾಡಿನಲ್ಲಿದ್ದ ಪ್ರಾಣಿಗಳಿಗೆ ಜಿಂಕೆಗಳು ಸಂಕಷ್ಟಕ್ಕೆ ಸಿಕ್ಕಿಕೊಂಡಿರುವುದು ಗೊತ್ತಾಗಿ ಸಿಂಹವನ್ನು ಕಳುಹಿಸಿದ್ದರು. ಜಿಂಕೆಗಳೆಲ್ಲವೂ ತಮ್ಮ ನಾಯಕಿಯನ್ನು ಉಳಿಸಿದ್ದಕ್ಕೆ ಸಿಂಹವನ್ನು ಅಭಿನಂದಿಸಿದವು.
– ಬನ್ನೂರು ಕೆ. ರಾಜು