ನವದೆಹಲಿ : ವಾಹನಗಳು ರಸ್ತೆ ಮೇಲೆ ಚಲಿಸುವ ವೇಳೆ ಅಡ್ಡಲಾಗಿ ಪ್ರಾಣಿಗಳು ಬರುವುದು ಸರ್ವೇ ಸಾಮಾನ್ಯ. ಆದ್ರೆ ಚಲಿಸುವ ಶಾಲಾ ಬಸ್ ಒಳಗಡೆ ಜಿಂಕೆಯೊಂದು ನೆಗೆಯುವ ದೃಶ್ಯವನ್ನು ನೀವು ಎಂದಾದರೂ ನೋಡಿದ್ದೀರಾ?. ಹಾಗಾದ್ರೆ ಇಲ್ಲಿದೆ ನೋಡಿ.
ಹೌದು ಅಮೆರಿಕಾದ ವರ್ಜೀನಿಯಾದಲ್ಲಿ ಶಾಲಾ ಬಸ್ ಒಂದು ರಸ್ತೆಯಲ್ಲಿ ಹೋಗುವ ವೇಳೆ ಇದ್ದಕ್ಕಿದ್ದಂತೆ ಜಿಂಕೆಯೊಂದು ಬಸ್ ಮುಂಬದಿ ಇರುವ ಗಾಜನ್ನು ಪುಡಿ ಮಾಡಿಕೊಂಡು ಬಸ್ ಒಳಗಡೆ ಎಂಟ್ರಿ ಕೊಟ್ಟಿದೆ. ಈ ವಿಡಿಯೋವನ್ನು ಬಸ್ ಒಳಗಡೆ ಇದ್ದ ಸಿಸಿ ಕ್ಯಾಮೆರಾ ಸೆರೆ ಹಿಡಿದಿದೆ.
ಅದೃಷ್ಟ ಎಂಬಂತೆ ಯಾವ ವಿದ್ಯಾರ್ಥಿಗೂ ಕೂಡ ತೊಂದರೆಯಾಗಿಲ್ಲ. ಜಿಂಕೆಯ ರಭಸದ ಪ್ರವೇಶಕ್ಕೆ ಹೆದರಿದ ವಿದ್ಯಾರ್ಥಿಗಳು ಜೋರಾಗಿ ಕಿರುಚಿದ್ದಾರೆ. ತಕ್ಷಣ ಬಸ್ ಚಾಲಕ ಬಸ್ ಬಾಗಿಲನ್ನು ತೆರೆದಿದ್ದು, ಜಿಂಕೆಯು ಕೆಳಗಡೆ ಇಳಿ ಓಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೊಹಾಟನ್ ಕೌಂಟಿಯ ಹಲವಾರು ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಡಬ್ಲ್ಯು ಟಿ ವಿ ಆರ್ ವರದಿ ಮಾಡಿದೆ. ಚಾಲಕರು ಶಾಲಾ ಬಸ್ ಅನ್ನು ನಿಧಾನ ಮಾಡಿ ಜಿಂಕೆಯನ್ನು ಹೊರಗಡೆ ಕಳಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಬಸ್ಸಿನಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.