ನರೇಗಲ್ಲ: ಸತತ ಬರಗಾಲದಿಂದ ಚಿಂತೆಗೀಡಾದ್ದ ರೈತ ಸಮುದಾಯ ಪ್ರಸಕ್ತ ಬಾರಿ ಆದ ಅಲ್ಪ ಪ್ರಮಾಣದ ಮಳೆಯಲ್ಲಿ ಬಿತ್ತನೆ ಮಾಡಿದ್ದು, ಬೀಜ ಮೊಳಕೆಯಾಡೆದ ಸಸಿಗಳ ಜಿಂಕೆಗಳ ದಂಡು ಲಗ್ಗೆಯಿಟ್ಟು ನಾಶ ಮಾಡುತ್ತಿದೆ.
ನರೇಗಲ್ಲ ಹೋಬಳಿ ವ್ಯಾಪ್ತಿಯ ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ನಾಗರಾಳ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ಹೊಸಳ್ಳಿ, ಜಕ್ಕಲಿ, ಬೂದಿಹಾಳ, ಮಾರನಬಸರಿ, ನರೇಗಲ್ಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮುಂಗಾರು ಮಳೆಗೆ ಬಿತ್ತನೆ ಮಾಡಿರುವ ಹೆಸರು, ಶೇಂಗಾ, ತೊಗರಿ, ಹತ್ತಿ, ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಈ ಜಮೀನುಗಳಿಗೆ ಜಿಂಕೆ ಹಿಂಡು ಲಗ್ಗೆ ಹಾಕಿ ಬೆಳೆ ನಾಶ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಂಕೆ ತಂಡ ಆಗಮನ: ಮುಂಗಾರು ಮಳೆಗಾಲದ ಸಮಯದಲ್ಲಿ ಆಹಾರದ ಕೊರತೆಯಿಂದ ಬಯಲು ಸೀಮೆಯ ಕಡೆಗೆ ಜಿಂಕೆಗಳ ದಂಡು ಮುಖ ಮಾಡುತ್ತಿವೆ. 20 ರಿಂದ 40 ಜಿಂಕೆಗಳ ತಂಡ ಬಿತ್ತದ ಜಮೀನಿಗೆ ಲಗ್ಗೆಯಿಟ್ಟು ಬೆಳೆಯನ್ನು ನಾಶ ಮಾಡುತ್ತಿವೆ.
ರಾತ್ರಿವಿಡೀ ಕಾವಲು ಕಾಯುವ ರೈತರು:
Advertisement
ಮುಂಗಾರು ಹಂಗಾಮಿನ ಆರಂಭಿಕ ಮಳೆಗಳು ಸುರಿಸಿದ ಭರಪುರ ಮಳೆಯಿಂದ ಭೂಮಿ ಹದಗೊಳಿಸಿ, ಬಿತ್ತನೆ ಮಾಡಲಾಗಿತ್ತು. ಬೀಜ ಮೊಳಕೆಯೊಡೆದು ಸಸಿಗಳಾಗುತ್ತಿದ್ದರೆ ಇನ್ನೊಂದೆಡೆ ಜಿಂಕೆಗಳು ಜಮೀನುಗಳಿಗೆ ನುಗ್ಗಿ ಬೆಳೆಯನ್ನು ತಿನ್ನುತ್ತಿವೆ.
Related Articles
Advertisement
ಬಿತ್ತದ ಬೀಜ ಮೊಳಕೆಯೊಡೆದು ಭೂಮಿ ಬಿಟ್ಟು ಎರಡು ಇಂಚು ಮೇಲೆ ಬರುತ್ತಿದ್ದಂತೆ ಜಿಂಕೆಗಳು ಹಾವಳಿ ಮಾಡುತ್ತಿರುವುದರಿಂದ ರೈತರು ಹಗಲು-ರಾತ್ರಿ ಕಾವಲು ಕಾಯಬೇಕಾಗಿದೆ.
ಕೆಲವು ರೈತರು ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಕೃಷಿ ಭೂಮಿಯ ಅಲ್ಲಲ್ಲಿ ಬೆದರು ಗೊಂಬೆಗಳನ್ನು ನಿಲ್ಲಿಸುತ್ತಾರೆ. ಮನುಷ್ಯ ನಿಂತಂತೆ ಬೆದರು ಗೊಂಬೆ ಭಾಸವಾದರೆ ಸ್ವಲ್ಪಮಟ್ಟಿನ ಹಾವಳಿ ನಿಯಂತ್ರಣ ಸಾಧ್ಯ ಎನ್ನುವುದು ರೈತರ ಲೆಕ್ಕಾಚಾರ. ಆದರೆ, ಮನುಷ್ಯನ ವಾಸನೆ ಬಾರದೆ, ಬೆದರು ಗೊಂಬೆಗಳ ಮೇಲೆ ಪಕ್ಷಿಗಳು ಕೂತಿರುವುದನ್ನು ಕಂಡು ಜಿಂಕೆ ಮತ್ತು ಕೃಷ್ಣಮೃಗಗಳು ನಿರ್ಭಯವಾಗಿ ಕೃಷಿ ಭೂಮಿಯಲ್ಲಿ ದಾಳಿ ನಡೆಸಿ ಬೆಳೆ ತಿನ್ನುತ್ತಿವೆ.
ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಜೂನ್, ಜುಲೈನಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ಹೆಚ್ಚಾಗಿರುತ್ತಿದೆ. ಇವು ದಾಳಿ ನಡೆಸುತ್ತಿರುವ ಪರಿಣಾಮ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಸಂಭವಿಸಿ ರೈತರು ತೊಂದರೆ ಅನುಭವಿಸುವಂತಾಗುತ್ತದೆ.
ಕೃಷ್ಣಮೃಗ (ಜಿಂಕೆ)ಗಳ ಹಾವಳಿ ನರೇಗಲ್ಲ ಹೋಬಳಿಯ ಅಬ್ಬಿಗೇರಿ, ಡ.ಸ. ಹಡಗಲಿ, ಹಾಲಕೆರೆ, ಯರೇಬೇಲೇರಿ, ಜಕ್ಕಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹೆಚ್ಚಾಗಿದೆ. ಇಲ್ಲಿಯ ಜಮೀನುಗಳಿಗೆ ಬೆಳ್ಳಂಬೆಳಗ್ಗೆ ಹಾಗೂ ಸಂಜೆ 5 ರಿಂದ 6 ಗಂಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಂಕೆಗಳು ಲಗ್ಗೆ ಇಟ್ಟು ಜಮೀನಿನಲ್ಲಿ ಬೆಳೆದ ಬೆಳಯನ್ನು ಸಂಪೂರ್ಣ ತಿಂದು ಹಾಕುತ್ತಿವೆ. ಇದರಿಂದಾಗಿ ಮತ್ತೆ ಮರಳಿ ಬಿತ್ತನೆ ಮಾಡಬೇಕಾದ ಅನಿವಾರ್ಯತೆಯಿಂದ ರೈತರಿಗೆ ತಲೆನೋವಾಗಿದೆ.
ಕಳೆದ ಐದಾರೂ ವರ್ಷಗಳಿಂದ ಬರಗಾಲದಿಂದ ಕಂಗೆಟ್ಟದ್ದು, ಈ ವರ್ಷ ಮುಂಗಾರು ಮಳೆ ರೈತ ಸಮುದಾಯವನ್ನು ಕೈಹಿಡಿಯುವ ಭರವಸೆ ನೀಡುತ್ತಿದೆ. ಆದರೆ, ಅಪಾರ ಪ್ರಮಾಣ ಜಿಂಕೆ ತಂಡಗಳು ಬಿತ್ತನೆ ಮಾಡಿದ ಬೀಜಗಳನ್ನು ತಿಂದು ಹಾಕುತ್ತಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತೊಂದರೆ ಮಾಡುತ್ತಿರುವ ಜಿಂಕೆಗಳನ್ನು ಹಿಡಿದು ಸಮೀಪದ ಬಿಂಕದಕಟ್ಟಿ ಧಾಮಕ್ಕೆ ಸಾಗಿಸಿ ಬೆಳೆ ರಕ್ಷಿಸಬೇಕು ಎಂದು ಗ್ರಾಮಗಳ ರೈತರ ಮನವಿಯಾಗಿದೆ.
•ಸಿಕಂದರ ಎಂ. ಆರಿ