ಸಾಮಾನ್ಯವಾಗಿ ಬಾಲಿವುಡ್ ನಾಯಕಿಯರು ಆದಷ್ಟು ಗ್ಲಾಮರಸ್ ಪಾತ್ರಗಳತ್ತ ಆಸಕ್ತರಾಗುವುದು, ಅಂಥ ಪಾತ್ರಗಳನ್ನೇ ಬಯಸುವುದು ಸರ್ವೇಸಾಮಾನ್ಯ. ಅದರಲ್ಲೂ ಬಹು ಬೇಡಿಕೆಯಲ್ಲಿರುವ ನಾಯಕ ನಟಿಯರಂತೂ, ತಮಗೆ ಸಿಗುವ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಎಷ್ಟು ಮಹತ್ವವಿದೆ, ಯಾವ ಹೀರೋ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದೇನೆ, ತನ್ನ ಪಾತ್ರ ಎಷ್ಟು ಗ್ಲಾಮರಸ್ ಆಗಿದೆ, ಸಂಭಾವನೆ ಎಷ್ಟು ಸಿಗುತ್ತದೆ, ಆ ಚಿತ್ರದಿಂದ ತನಗೆಷ್ಟು ಸ್ಕೋಪ್ ಸಿಗುತ್ತದೆ. ತನಗಿರುವ ಡಿಮ್ಯಾಂಡ್ ಎಷ್ಟು ಪಟ್ಟು ಹೆಚ್ಚಾಗುತ್ತದೆ. ಹೀಗೆ ಹಲವು ಸಂಗತಿಗಳನ್ನು ಅಳೆದು, ತೂಗಿ ಲೆಕ್ಕಾಚಾರ ಹಾಕಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ.
ಆದರೆ, ಕೆಲವೊಂದು ನಾಯಕಿಯರು ಇವೆಲ್ಲದಕ್ಕೂ ಅಪವಾದವೆಂಬಂತೆ ಚಿತ್ರಗಳನ್ನು ಒಪ್ಪಿಕೊಂಡು ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡುತ್ತಾರೆ. ಅಂಥ ನಾಯಕಿಯರಲ್ಲಿ ಒಬ್ಬರು ದೀಪಿಕಾ ಪಡುಕೋಣೆ. ಹೌದು, ಸದ್ಯ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಾಯಕಿಯಾಗಿರುವ ದೀಪಿಕಾ, ಚಿತ್ರದಿಂದ ಚಿತ್ರಕ್ಕೆ ಹೊಸ ಪಾತ್ರಗಳನ್ನು ಬಯಸುವಾಕೆ.
ಪದ್ಮಾವತ್ ಚಿತ್ರದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಬಾಲಿವುಡ್ ಸಿನಿಪ್ರಿಯರ ಮನಗೆದ್ದಿದ್ದ ದೀಪಿಕಾ ಪಡುಕೋಣೆ, ಮದುವೆಯ ಬಳಿಕ ಮತ್ತೂಂದು ಚಿತ್ರದ ಮೂಲಕ ಪ್ರೇಕ್ಷಕರ ಮೂಲಕ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಮದುವೆಯ ಬಳಿಕ ದೀಪಿಕಾ ಎಂಥ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಬಹುದು ಎಂಬ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಇಲ್ಲಿಯವರೆಗೆ ಬಹುತೇಕ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ, ಇದೇ ಮೊದಲ ಬಾರಿಗೆ ನೈಜ ಘಟನೆ ಆಧಾರಿತ ಡಿ-ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ದೀಪಿಕಾರ ಮುಂಬರುವ ಚಿತ್ರದ ಹೆಸರು ಚಪಾಕ್. ಈಗಾಗಲೇ ಈ ಚಿತ್ರದ ಕೆಲಸಗಳು ಪ್ರಾರಂಭವಾಗಿದ್ದು, ಇತ್ತೀಚೆಗೆ ಚಪಾಕ್ ಚಿತ್ರದ ಫರ್ಸ್ಡ್ಲುಕ್ ಹೊರಬಂದಿದೆ. ಇನ್ನು ಚಪಾಕ್ ಚಿತ್ರದಲ್ಲಿ ದೀಪಿಕಾ ಫರ್ಸ್ಡ್ಲುಕ್ ಲುಕ್ ನೋಡಿ, ಇದು ನಿಜವಾಗಿಯೂ ದೀಪಿಕಾ ಅವರೇನಾ? ಎಂದು ಬೆರಗಾಗಿ ನೋಡುತ್ತಿದ್ದಾರೆ. ಅದಕ್ಕೆ ಕಾರಣ ಈ ಚಿತ್ರದಲ್ಲಿ ದೀಪಿಕಾ ನಿರ್ವಹಿಸುತ್ತಿರುವ ಪಾತ್ರ.
ಅಂದ ಹಾಗೆ, ಚಪಾಕ್ ಚಿತ್ರ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, 2005ರಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ, ದೇಶದಾದ್ಯಂತ ಸಂಚಲನ ಮೂಡಿಸಿದ್ದ ಲಕ್ಷ್ಮೀ ಅಗರ್‌ವಾಲ್ ಎನ್ನುವ ಸಂತ್ರಸ್ತ ಮಹಿಳೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಚಪಾಕ್ ಫರ್ಸ್ಡ್ ಲುಕ್ ನೋಡುಗರ ಮನ ಮುಟ್ಟಲು ಯಶಸ್ವಿಯಾಗಿದ್ದು, ಚಿತ್ರದ ಬಗ್ಗೆ ಮತ್ತು ದೀಪಿಕಾ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ದೊಡ್ಡ ಪ್ರಶಂಸೆಯ ಮಾತುಗಳು ವ್ಯಕ್ತವಾಗುತ್ತಿದೆ. ತಲ್ವರ್, ರಾಝಿ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮೇಘನಾ ಗುಲ್ಜಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಪಾಕ್ 2020ರ ಜನವರಿ 10ರಂದು ಬಿಡುಗಡೆಯಾಗಲಿದೆ.