ಪ್ಯಾರಿಸ್: ಭಾರತದ ಸ್ಟಾರ್ ಆರ್ಚರಿ ಆಟಗಾರ್ತಿ ದೀಪಿಕಾ ಕುಮಾರಿ ಆರ್ಚರಿ ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ರಾಂಚಿಯ 27 ವರ್ಷದ ದೀಪಿಕಾ ಅವರು 2012ರಿಂದ ಇದೇ ಮೊದಲ ಬಾರಿ ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ರವಿವಾರ ನಡೆದ ಪ್ಯಾರಿಸ್ ಆರ್ಚರಿ ವಿಶ್ವಕಪ್‌ನ ವನಿತೆಯರ ವೈಯಕ್ತಿಕ, ರಿಕರ್ವ್, ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಗೆದ್ದು ಬೀಗಿದ ದೀಪಿಕಾ ಕುಮಾರಿ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ದೀಪಿಕಾ ಅವರ ಈ ಸಾಧನೆಯಿಂದ ಅವರು ಸೋಮವಾರ ಪ್ರಕಟವಾದ ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆಯುವಂತಾಗಿದೆ ಎಂದು ವಿಶ್ವ ಅರ್ಚರಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಇದನ್ನೂ ಓದಿ :ಕೆಂಪೇಗೌಡರ ದೂರದೃಷ್ಟಿ ಪ್ರತಿಯೊಬ್ಬರಿಗೂ ಮಾದರಿ
ಮಹಿಳೆಯರ ವೈಯಕ್ತಿಕ ಸ್ಪರ್ಧೆಯಲ್ಲಿ ರಶ್ಯದ ಎಲೆನಾ ಒಸಿಪೋವಾ ವಿರುದ್ಧ 6-0, ಮಿಶ್ರ ಫೈನಲ್‌ನಲ್ಲಿ ಪತಿ ಅತನು ದಾಸ್ ಜತೆ ಸೇರಿ ನೆದರ್ಲೆಂಡ್ಸ್‌ನ ಸೆಫ್ ವಾನ್ ಡೆನ್ ಬರ್ಗ್-ಗ್ಯಾಬ್ರಿಯೇಲಾ ಕ್ಲೋಸರ್ ವಿರುದ್ಧ 5-3, ರಿಕರ್ವ್ ತಂಡದಲ್ಲಿ ಅಂಕಿತಾ ಭಕತ್ ಮತ್ತು ಕೋಮಲಿಕಾ ಬಾರಿ ಜತೆ ಸೇರಿ ಮೆಕ್ಸಿಕೊ ವಿರುದ್ಧ 5-1 ಅಂತರದ ಅಮೋಘ ಗೆಲುವು ಸಾಧಿಸಿದ್ದರು.