Advertisement

ದೀಪಾವಳಿ ಸಂಭ್ರಮಕ್ಕೆ ಬೆಳಕಿನ ಮೆರುಗು

09:18 PM Nov 15, 2020 | mahesh |

ಮಹಾನಗರ: ದೀಪಾವಳಿಯ ಎರಡನೇ ದಿನವಾದ ರವಿವಾರವೂ ನಗರದ ಜನತೆ ಮನೆಗಳಲ್ಲಿ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು. ಮನೆಗಳಲ್ಲಿ ಹಣತೆ ಹಚ್ಚಿ ಬೆಳಕಿನ ಹಬ್ಬವನ್ನು ಆಕರ್ಷಕಗೊಳಿಸಿತು.

Advertisement

ಮನೆಮಂದಿಯೆಲ್ಲ ಸೇರಿ ಆಚರಿಸುವ ಹಬ್ಬವೆಂದೇ ಖ್ಯಾತಿಯಾದ ದೀಪಾವಳಿಯನ್ನು ಈ ಬಾರಿಯೂ ಜನ ಸಂಭ್ರಮದಿಂದ ಆಚರಿಸಿದರು. ಇಡೀ ಮನೆಯನ್ನು ದೀಪಗಳಿಂದ ಸಿಂಗರಿಸಿ, ಮನೆಯ ಮೆಟ್ಟಿಲು, ಬಾಲ್ಕನಿ ಸಹಿತ ಎಲ್ಲೆಡೆಯೂ ಹಣತೆ ಹಚ್ಚಿ, ಗೂಡುದೀಪಗಳನ್ನು ಉರಿಸಿ, ಹೊಸ ಬಟ್ಟೆ ತೊಟ್ಟು ಮನೆಮಂದಿಯೆಲ್ಲ ದೀಪಾವಳಿ ಆಚರಿಸಿ ಸಂಭ್ರಮಪಟ್ಟರು.

ನಗರದ ವಿವಿಧೆಡೆ ದೀಪಾವಳಿ ಅಂಗವಾಗಿ ಗೋಪೂಜೆ, ಅಂಗಡಿ ಪೂಜೆ, ವಾಹನ ಪೂಜೆ ನಡೆಯಿತು. ಕದ್ರಿ ಮಂಜುನಾಥ ದೇಗುಲ, ಮಹತೋಭಾರ ಶ್ರೀ ಮಂಗಳಾದೇವಿ ದೇಗುಲ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಹಿತ ನಗರದ ವಿವಿಧ ದೇಗುಲಗಳಲ್ಲಿ ಸಾಂಪ್ರದಾಯಿಕ ಪೂಜೆಗಳು ಜರಗಿದವು. ದೀಪಾವಳಿ ಹಿನ್ನೆಲೆಯಲ್ಲಿ ಭಕ್ತರು ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದರು. ಮಂಗಳೂರು ಗ್ರಾಮಾಂತರ, ಕಾಸರಗೋಡು ಜಿಲ್ಲೆಯಾದ್ಯಂತ ಕೂಡ ಜನ ಗೋಪೂಜೆ, ಬಲೀಂದ್ರ ಪೂಜೆ, ಅಂಗಡಿ ಪೂಜೆ, ವಾಹನ ಪೂಜೆ ನೆರವೇರಿಸುವುದರೊಂದಿಗೆ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಬಲೀಂದ್ರ ಪೂಜೆ ನಡೆಯಿತು. ಅನಂತರ ಹೊರಾಂಗಣ ಉತ್ಸವ ಆರಂಭಗೊಂಡಿತು.

ವಿವಿಧ ಪೂಜೆಗಳ ಹಿನ್ನೆಲೆಯಲ್ಲಿ ರವಿವಾರವೂ ಮಾರುಕಟ್ಟೆಯಲ್ಲಿ ಹೆಚ್ಚಿನ ಜನ ಖರೀದಿಯಲ್ಲಿ ತೊಡಗಿದ್ದರು. ಹೂ, ಹಣ್ಣು ಮಾರಾಟಗಾರರಿಗೆ ಬಿರುಸಿನ ವ್ಯಾಪಾರ ಕಂಡು ಬಂತು.

ಉಳ್ಳಾಲ: ಸರಳ ಆಚರಣೆ
ಉಳ್ಳಾಲ: ಪಟಾಕಿಗಳ ಭರಾಟೆಯಿಲ್ಲದೆ, ಸಾಂಪ್ರದಾಯಿಕ ಗೂಡುದೀಪ, ಹಣತೆ ಹಚ್ಚುವ ಮೂಲಕ ಸರಳ ರೀತಿಯಿಂದ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೀಪಾವಳಿ ಆಚರಿಸಲಾಯಿತು. ಸಾರ್ವಜನಿಕ ದೀಪಾವಳಿ ಉತ್ಸವ ಮತ್ತು ಗೂಡುದೀಪ ಸ್ಪರ್ಧೆಗಳನ್ನು ಈ ಬಾರಿ ಉಳ್ಳಾಲ ವ್ಯಾಪ್ತಿಯಲ್ಲಿ ಆಯೋಜಿಸಿಲ್ಲ. ಆದರೆ ಆನ್‌ಲೈನ್‌ ಮೂಲಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆಗೆ ಈ ಬಾರಿ ಹೆಚ್ಚು ಒತ್ತು ನೀಡಲಾಗಿದೆ. ಸಾರ್ವಜನಿಕ ಗೋ ಪೂಜೆಗಳು ನಡೆದವು.

Advertisement

ಗಮನ ಸೆಳೆದ ಗೂಡುದೀಪ
ಉಳ್ಳಾಲ: ಇಲ್ಲಿನ ಸಾಮಾಜಿಕ ಕಾರ್ಯಕರ್ತ ದಯಾನಂದ ಬಂಗೇರ ಮೊಗವೀರಪಟ್ಣ ಮತ್ತು ಹರೀಶ್‌ ಬಂಡಿಕೊಟ್ಯ ಅವರು ನಿರ್ಮಿಸಿದ 15 ಅಡಿ ಎತ್ತರದ ಸಾಂಪ್ರದಾಯಿಕ ಗೂಡುದೀಪ ಜನರ ಗಮನೆ ಸೆಳೆಯಿತು. ಎರಡು ವರ್ಷಗಳಿಂದ ಸಾಮರಸ್ಯದ ಸಂಕೇತವಾಗಿ ಉಳ್ಳಾಲ ಛೋಟಾ ಮಂಗಳೂರು ಬಸ್‌ ನಿಲ್ದಾಣ ಬಳಿ ಬೃಹತ್‌ ಗಾತ್ರದ ಗೂಡುದೀಪವನ್ನು ಅಳವಡಿಸುತ್ತಿದ್ದು, ನಾಲ್ಕು ದಿನಗಳ ಕಾಲ ನಿರಂತರವಾಗಿ ಈ ಗೂಡು ದೀಪವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next