Advertisement

Deepavali-2023: ದೀಪಾವಳಿ ಬಂತು…ಒಂದೊಂದು ಕಡೆ ಒಂದೊಂದು ರೀತಿಯ ಗೂಡು ದೀಪ…

03:14 PM Nov 11, 2023 | Team Udayavani |

ಹಬ್ಬವೆಂದರೆ ಬರಿ ಮೈ ಅಲ್ಲದೆ ಮನ ಸ್ವಚ್ಛಗೊಳಿಸುವುದು ಮತ್ತು ದಿನನಿತ್ಯವಲ್ಲದ ಹೊಸದೊಂದು ದಿನದ ಆಚರಣೆ. ಅನೇಕ ಹಬ್ಬವನ್ನು ನಾವು ಭಾರತದಲ್ಲಿ ನೋಡುತ್ತೇವೆ. ಅನೇಕ ಪ್ರಸಿದ್ಧ ಹಬ್ಬಗಳಲ್ಲಿ ದೀಪಾವಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ.

Advertisement

ಸಾಮಾನ್ಯವಾಗಿ ದೀಪಾವಳಿ ಎಂದರೆ ಬೆಳಕಿನ ಹಬ್ಬ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿ ಆಚರಿಸಲಾಗುತ್ತದೆ. ಹಣತೆಯಿಂದ ಮನೆ ಬೆಳಗಿಸಿ, ಬಣ್ಣ ಬಣ್ಣದ ರಂಗೋಲಿಯಿಂದ ಕಂಗೊಳಿಸುವ ಹಬ್ಬ. ದೀಪಾವಳಿ ಹಿಂದೂಗಳ ಹಬ್ಬವಾಗಿದ್ದು, ಕೆಲವೆಡೆ ಹಿಂದೂಯೇತರ ಸಮುದಾಯಗಳು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.

ನನ್ನ ಮನೆಯಲ್ಲಿ ದೀಪಾವಳಿಯನ್ನು ಹಿಂದೂ ಧರ್ಮದವರ ಹಾಗೆ ಸಾಂಪ್ರದಾಯಿಕವಾಗಿ ಆಚರಿಸದೆ ಇದ್ದರೂ ಪಟಾಕಿಯನ್ನು ಹೊಡೆದು ಸಂಭ್ರಮಿಸುತ್ತೇವೆ. ಅಕ್ಕ-ಪಕ್ಕದ ಮನೆಯವರು ಹೇಗೆ ದೀಪಾವಳಿಯನ್ನು ಆಚರಿಸುತ್ತಾರೆ ಎಂಬುವುದನ್ನು ಬಾಲ್ಯದಿಂದಲೂ ನೋಡಿ ಬೆಳೆದವಳು ನಾನು.

ಈ ಹಬ್ಬವನ್ನು ಕೆಲವರು ಐದು ದಿನ ಆಚರಿಸಿದರೆ, ಇನ್ನೂ ಕೆಲವರು ಮೂರು ದಿನ ಆಚರಿಸುತ್ತಾರೆ. ನೀರು ತುಂಬುವುದು, ನರಕ ಚತುರ್ದಶಿ, ದೀಪಾವಳಿ ಅಮಾವಾಸ್ಯೆ, ಬಲಿಪಾಡ್ಯಮಿ, ದ್ವಿತೀಯ.. ಹೀಗೆ ಒಂದೊಂದು ದಿನಕ್ಕೂ ಒಂದೊಂದು ವಿಶಿಷ್ಟವಾದ ಸ್ಥಾನವಿದೆ. ದೀಪಾವಳಿ ಮುಗಿದ ನಂತರ ಕಾರ್ತಿಕ ಮಾಸ ಪ್ರಾರಂಭವಾಗುತ್ತದೆ.

ದೀಪಾವಳಿ ಹಿಂದಿನ ದಿನ ಸ್ನಾನ ಮಾಡುವ ಹಂಡೆಗೆ ನೀರು ತುಂಬಿಸಿ, ಮರುದಿನ ಮನೆಯ ಸದಸ್ಯರೆಲ್ಲ ಮೈಗೆ ಹರಳೆಣ್ಣೆ ಹಚ್ಚಿ ಸ್ನಾನ ಮಾಡಿ ಶುಭ್ರವಾಗುತ್ತಾರೆ. ಅಲ್ಲಿಂದ ಶುರುವಾಗುವುದೇ ಹಬ್ಬದ ತಯಾರಿ. ಮರುದಿನ ಬರುವ ನರಕ ಚತುರ್ದಶಿಗೆ ಅನೇಕ ಮನೆಯಲ್ಲಿ ಧನಲಕ್ಷ್ಮಿ ಪೂಜೆ ಮಾಡುತ್ತಾರೆ. ಪುರಾಣದ ಪ್ರಕಾರ ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಕೊಂದು ಸತ್ಯಭಾಮೆಗೆ ಪಾರಿಜಾತ ವೃಕ್ಷವನ್ನು ತಂದ ದಿನ ಎಂದು ಪುರಾಣದ ಕಥೆ ಇದೆ.

Advertisement

ಮುಂಬರುವ ದಿನವೇ ದೀಪಾವಳಿ ಅಮಾವಾಸ್ಯೆ. ಈ ಅಮಾವಾಸ್ಯೆಯಂದು ಬಲಿಪಾಡ್ಯಮಿಗೆ ಬೇಕಾದ ಸಕಲ ಸಿದ್ಧತೆಯನ್ನು ಮಾಡುತ್ತಾರೆ. ಗೋ ಪೂಜೆಗೆ ದನ-ಕರುಗಳನ್ನು ಚೆನ್ನಾಗಿ ತೊಳೆದು ಅವುಗಳನ್ನು ಶೃಂಗರಿಸಲು ಬೇಕಾದ ಚೆಂಡು ಹೂವು, ಉಗಣೆ ಕಾಯಿ, ಅಷ್ಟೇ ಅಲ್ಲದೆ ಸುಮಾರು ಹನ್ನೊಂದು ತರಹದ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಆ ದಿನ ತಿಂಡಿ ತಿನಿಸುಗಳನ್ನು ಮಾಡುವುದೇ ಒಂದು ದೊಡ್ಡ ಸಂಭ್ರಮ.

ಕೊನೆಯದಾಗಿ ಬರುವುದೇ ಬಲಿಪಾಡ್ಯಮಿ. ಬಲಿಂದ್ರ ರಾಜನ ನೆನಪಿಗಾಗಿ ಕೃಷಿಯಲ್ಲಿ ಉಪಯೋಗಿಸುವಂತಹ ಹಾರೆ, ನೇಗಿಲು, ಭತ್ತದ ಕಣಜ ಅದರೊಂದಿಗೆ ದಿನನಿತ್ಯದ ಉಪಕರಣ ಸಾಮಗ್ರಿಗಳಾದ ಸೇರು, ಕಡಗೋಲು, ಅದರೊಂದಿಗೆ ದನಗಳಿಗೆ ಸಿದ್ಧಪಡಿಸಿದ ಹಾರವನ್ನು ಇಟ್ಟು ಪೂಜಿಸುತ್ತಾರೆ.

ತದನಂತರ ದನಗಳಿಗೆ ಕೆಮ್ಮಣ್ಣು ಮತ್ತು ಜೇಡಿ ಮಣ್ಣಿನಿಂದ ಅಲಂಕರಿಸಿ, ಪೂಜೆ ಮಾಡುವವರು ಶುಭ್ರವಾದ ನಂತರ ದನಗಳಿಗೆ ಹಾರ ಹಾಕುತ್ತಾರೆ. ಪೂಜೆ ಮುಗಿಸಿ ಹಬ್ಬದ ಊಟ ಮಾಡಿ ಸಂಜೆ ಹೊತ್ತಿಗೆ ಗದ್ದೆ ತೋಟಕ್ಕೆ “ದೀಪೋಳ್ಗೋ ದೇವ್ರು ದೀಪೋಳ್ಗೋ”ಎಂದು ಹೇಳುತ್ತಾ ವಾಟೆ ಕೋಲಿಗೆ ಬಟ್ಟೆಯನ್ನು ಸುತ್ತಿ ಬೆಂಕಿ ಹತ್ತಿಸಿ ದೀಪವನ್ನು ಹಚ್ಚಿ ಇಟ್ಟು ಬರುತ್ತಾರೆ.

ಸಂಜೆ ಬಾಳೆಗೊನೆಯ ಕೆಂಪಗಿನ ಹೂವಿಗೆ ಸುಮಾರು ಕಡ್ಡಿ ಚುಚ್ಚಿ ಬಟ್ಟೆ ಸುತ್ತಿ ದೀಪವನ್ನು ಹಚ್ಚುತ್ತಾರೆ. ಇದನ್ನು ಗೂಡು ದೀಪ ಎಂದು ಕರೆಯುತ್ತಾರೆ. ಈ ರೀತಿಯ ಗೂಡು ದೀಪವನ್ನು ನಾವು ಸಾಮಾನ್ಯವಾಗಿ ಮಲೆನಾಡಿನ ಭಾಗಗಳಲ್ಲಿ ಗಮನಿಸಬಹುದು. ಒಂದೊಂದು ಕಡೆ ಒಂದೊಂದು ರೀತಿಯ ಗೂಡು ದೀಪವನ್ನು ಕಾಣಬಹುದು. ತದನಂತರ ಪಟಾಕಿ, ಸುರುಸುರು ಬತ್ತಿ, ನೆಲಚಕ್ರ, ಚಿಕ್ಕಮಕ್ಕಳು ಕೋವಿಯನ್ನೆಲ್ಲ ಹೊಡೆದು, ರಾತ್ರಿಯ ಹಬ್ಬದ ಊಟ ಮಾಡಿದರೆ ಅಲ್ಲಿಗೆ ಮುಗಿಯಿತು ದೀಪಾವಳಿ ಹಬ್ಬ.

-ಸ್ನೇಹ ವರ್ಗೀಸ್

ಎಂಜಿಎಂ ಕಾಲೇಜು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next