Advertisement

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

06:01 PM Oct 31, 2024 | Team Udayavani |

ಇಂದು ಎಣ್ಣೆಯ ದೀಪಗಳ ಹಂಗಿಲ್ಲ, ದೇವರಿಗೂ ದೀಪ ಹಚ್ಚುವ ಪರಿಪಾಠ ಅನೇಕ ಮನೆಗಳಲ್ಲಿ ಇಲ್ಲ. ಹೀಗಾಗಿ ದೀಪಗಳ ಮಹತ್ವದ ಅರಿವಿಲ್ಲ. ದೀಪಗಳನ್ನು ಉರಿಸುವಾಗ ಅವುಗಳಿಂದ ಉತ್ಪತ್ತಿಯಾದ ಹೊಗೆ ವಾಯು ಸೇರುತ್ತದೆ. ಹೀಗಾಗಿ ವಾಯುವನ್ನು ಮಲಿನಗೊಳಿಸುವ ಹೊಗೆ ಆದಷ್ಟೂ ಆಗದ ರೀತಿಯಲ್ಲಿ ದೀಪ ಉರಿಸುತ್ತಿದ್ದರು. ಉದಾಹರಣೆಗೆ ಎಳ್ಳೆಣ್ಣೆಯ ದೀಪ ಉರಿಸುವುದರಿಂದ ಅದರ ಹೊಗೆ ಸುತ್ತಲಿನ ವಾತಾವರಣ ಸೇರಿ ಉಸಿರಾಟ ಮೂಲಕ ನಮ್ಮೊಳಗೆ ಸೇರಿ ಮನದ ಕ್ಲೇಶನಾಶಕ್ಕೆ ಕಾರಣವಾಗುತ್ತದೆ. ತುಪ್ಪದ ದೀಪ ಕೂಡ ಹಾಗೆ. ಸೀಮೆಎಣ್ಣೆ ದೀಪ ದೇವರ ಮುಂದೆ ಬೆಳಗಲ್ಲ.

Advertisement

ಏಕೆಂದರೆ ಕಲ್ಲೆಣ್ಣೆ ಹೊಗೆ ಆರೋಗ್ಯಕ್ಕೆ ಹಾನಿಕರ. ಮನುಷ್ಯ ಪರಿಶ್ರಮದಿಂದ ತಯಾರಿಸಿಕೊಂಡ ಕಡಲೆಕಾಯಿ ಎಣ್ಣೆ,
ಶೇಂಗಾ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಇಂತಹ ಎಣ್ಣೆಗಳನ್ನು ಮಾತ್ರ ದೀಪಗಳಿಗೆ ಬಳಸಲಾಗುತ್ತದೆ. ಕಾಲೇಜೊಂದರ ಉಪನ್ಯಾಸಕರೊಬ್ಬರಿಗೆ ವೇದಿಕೆ ಕಾರ್ಯಕ್ರಮಗಳಲ್ಲಿ ದೀಪ ಬೆಳಗುವುದು ಬಹಳ ಕೋಪ ತರಿಸುತಿತ್ತಂತೆ. ಸದರಿ ಉಪನ್ಯಾಸಕರು ತಮ್ಮ ಉಪನ್ಯಾಸಗಳಲ್ಲಿ ದೀಪ ಬೆಳಗುವವರ ಕುರಿತು ವೈದಿಕ ಧರ್ಮದವರು, ಮೂಢನಂಬಿಕೆಯುಳ್ಳವರು ಎಂದೆಲ್ಲ ಗಂಟೆಗಟ್ಟಲೆ ಉಪನ್ಯಾಸ ಬಿಗಿಯುತ್ತಿದ್ದರಂತೆ.

ಒಂದು ದಿನ ವಿಶೇಷ ಸಮಾರಂಭವೊಂದಕ್ಕೆ ವಿದೇಶಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಬ್ಬರು ಅತಿಥಿಗಳಾಗಿ
ಬರುವವರಿದ್ದರು. ಆ ದಿನದ ಕಾರ್ಯಕ್ರಮದ ವೇದಿಕೆ-ವ್ಯವಸ್ಥೆಯನ್ನು ಕಾಲೇಜಿನ ಪ್ರಾಚಾರ್ಯರು ತಾವೇ ಸ್ವತಃ ನಿಂತು ಮಾಡಿಸಿದ್ದರಂತೆ. ದೀಪ ಬೆಳಗುವ ಕಾರ್ಯಕ್ರಮದಿಂದ ಉದ್ಘಾಟನೆಗೊಳ್ಳುವ ಕಾರ್ಯಕ್ರಮದಲ್ಲಿ ದೀಪ ಬೆಳಗುತ್ತಿರುವಾಗ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಭಕ್ತಿಗೀತೆ ಹಾಡಿದರಂತೆ.

ತಾವೇ ಹಚ್ಚಿದ ದೀಪ ಮತ್ತೆ ಮತ್ತೆ ನಿಂತು ನೋಡಿದ ವಿದೇಶಿ ಗಣ್ಯರು ಅದರ ಫೋಟೋಗಳನ್ನು ತೆಗೆದು ಕೊಡುವಂತೆ
ಎದುರಿಗಿದ್ದ ಛಾಯಾಗ್ರಾಹಕನಲ್ಲಿ ವಿನಂತಿಸಿದರಂತೆ. ಜತೆಗೆ ತಮ್ಮ ಉಪನ್ಯಾಸದಲ್ಲಿ ದೀಪದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ದೀಪದಲ್ಲಿರುವ ದೈವತ್ವದ ಅರಿವು ಅವರಿಗಾಯ್ತೋ? ಇಲ್ಲವೋ ಗೊತ್ತಿಲ್ಲ ಆದರೆ ದೀಪವೆಷ್ಟು ಸುಂದರ, ಮನಮೋಹಕ ಮತ್ತು ಎಷ್ಟು ಸಂತೋಷದಾಯಕ ಎಂಬುದನ್ನು ಅವರು ಅರಿತಿದ್ದರು.

ಸಭಾಂಗಣದಲ್ಲಿ ಕುಳಿತು ಅವರ ಉಪನ್ಯಾಸ ಕೇಳುತ್ತಿದ್ದ ದೀಪ ವಿರೋಧಿ-ಉಪನ್ಯಾಸಕರಿಗೆ ತನ್ನ ಬಗೆಗೆ ಕೀಳರಿಮೆ ಹುಟ್ಟಲು ಆರಂಭವಾಯ್ತಂತೆ. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬರಾಕ್‌ ಒಬಾಮಾ ತಮ್ಮ ಕಚೇರಿಯಲ್ಲಿ ಭಾರತೀಯ ಪುರೋಹಿತರಿಂದ ದೀಪ ಬೆಳಗಿ “ಅಗ್ನಿ ಮೀಳೇ ಪುರೋಹಿತಂ’ ಎಂಬ ವೇದಮಂತ್ರ ಹೇಳಿಸಿ, ಕೇಳಿ ಖುಷಿಪಟ್ಟ ವಿಚಾರ ಜಗತ್ತಿನಾದ್ಯಂತ ಅನೇಕರಿಗೆ ತಿಳಿದಿದೆ. ಎಂದಾಗ ದೀಪದ ಮಹತ್ವ ಎಂಥದ್ದು ಎಂಬುದನ್ನು ನಾವು ಅರಿಯಬೇಕು.

Advertisement

ದೀಪಗಳಲ್ಲಿ ವೈವಿಧ್ಯತೆವಿದೆ. ಜ್ಯೋತಿಗೆ ನಿಗದಿತ ಆಕಾರವಿಲ್ಲದಿದ್ದರೂ ದೀಪ ಹಚ್ಚುವ ಹಣತೆಗಳಲ್ಲಿ, ದೀಪದ ಕಾಲು-ಕಂಬಗಳಲ್ಲಿ ವೈವಿಧ್ಯತೆಯನ್ನು ಕಾಣಬಹುದು. ದೀಪದ ಕಾಲು-ಕಂಬದ ಮೇಲೆ ಮರದ ಟೊಂಗೆಗಳಂತೆ ಟಿಸಿಲಾಗುವ ಆಕಾರಗಳಿದ್ದು ಹತ್ತಾರು ಹಣತೆಗಳು ಅಲ್ಲಿರಬಹುದು.

ರಥದ ಆಕಾರದಲ್ಲಿ ಸುತ್ತಮುತ್ತ ಹಣತೆಗಳಿರುವ ದೀಪದ ಕಂಬವಿರಬಹುದು. ಸಾಲಾಗಿ ಹಚ್ಚುವ ದೀಪಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದಕ್ಕೆಂತಲೇ “ದೀಪಾವಳಿ’ ಎಂದೇ ಹಬ್ಬವನ್ನು ಹೆಸರಿಸಿದರು. ಮಿಥಿಲೆಯ ಜನಕನನ್ನು ಒಮ್ಮೆ ಒಂದು ಸಂದೇಹ ಬಲವಾಗಿ ಕಾಡಿತು. ರಾಜಗುರುಗಳಾದ ಯಾಜ್ಞವಲ್ಕ್ಯರನ್ನು ಕರೆಸಿದ ಆತ ಅವರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ.

ಪುರುಷನಿಗೆ ನಿಜವಾದ ಜ್ಯೋತಿ ಯಾವುದು ಎಂಬುದೇ ಆತನ ಸಮಸ್ಯೆ. ಯಾಜ್ಞವಲ್ಕéರು ಉತ್ತರಿಸುತ್ತಲೇ ಹೋದರು. ಮೊದಲು ಆದಿತ್ಯನೆಂದರು, ಜನಕ ಕೇಳಿದ: ಹಗಲಲ್ಲಿ ಸೂರ್ಯನಿರುತ್ತಾನೆ, ರಾತ್ರಿಯೆಲ್ಲ ಚಂದ್ರ ಎಂಬ ಉತ್ತರ ಬಂತು. ಇಬ್ಬರೂ ಇಲ್ಲದಾಗ ಗುರುಗಳೇ-ಅರಸ ಮತ್ತೆ ಕೇಳಿದ. ಅಗ್ನಿಯೇ ಜ್ಯೋತಿ ಎಂದರು ಗುರು ಯಾಜ್ಞವಲ್ಕ್ಯರು. ಅಗ್ನಿಯೂ ಶಾಂತವಾದಾಗ ಯಾವುದು?ಎಂಬ ಜನಕನ ಪ್ರಶ್ನೆಗೆ ವಾಕ್‌, ಕತ್ತಲೆಯಲ್ಲಿ ಯಾವ ದಿಕ್ಕಿನಿಂದ ಪರಿಚಿತ ಧ್ವನಿ ಕೇಳಿ ಬರುವುದೋ ಆ ಕಡೆಗೆ ಮನುಷ್ಯ ಗಮನ ಕೊಡುತ್ತಾನಲ್ಲ, ಆಗ ಅದೇ ಜ್ಯೋತಿ.

ಅಷ್ಟಕ್ಕೇ ಜನಕನಿಗೆ ಸಮಾಧಾನವಾಗಲಿಲ್ಲ, ಆತ ಮತ್ತೆ ಕೇಳಿದ; ಒಂದೊಮ್ಮೆ ಸೂರ್ಯ, ಚಂದ್ರ, ಅಗ್ನಿ, ವಾಕ್‌ ಯಾವುದೂ ಇಲ್ಲವಾದರೆ, ಪುರುಷ ಮಲಗಿ ನಿದ್ರಿಸುತ್ತಿದ್ದರೆ ಅಥವಾ ಕನಸು ಕಾಣುತ್ತಿದ್ದರೆ ಆಗ ಯಾವುದು ಜ್ಯೋತಿ? ಯಾಜ್ಞವಲ್ಕ್ಯರು ಉತ್ತರಿಸಿದರು: ಆಗ ಪುರುಷನಿಗೆ ಒಳಗಿನ ಆತ್ಮವೇ ಜ್ಯೋತಿ. ಜನಕ ಸುಮ್ಮನಿರುವನೇ ಆತ್ಮನ ಬಗ್ಗೆ ಕೇಳಿ ತಿಳಿಯಲು ಆರಂಭಿಸಿದ: ಆತ್ಮನಾದರೂ ಯಾರು? ಆತ ಹೇಗಿದ್ದಾನೆ? ಆತ್ಮನ ಸ್ವರೂಪವನ್ನು ಪದಗಳಲ್ಲಿ ವರ್ಣಿಸುವುದು ಬಹಳ ಕಷ್ಟ; ಅದು ಅನುಭವಕ್ಕೆ ನಿಲುಕುವ ವಿಷಯವೇ ಹೊರತು ಹೇಳಲು ಬರುವಂಥದ್ದಲ್ಲ. ಆದರೂ ಕ್ಲಿಷ್ಟವಾದ ವಿಷಯವನ್ನು ಸರಳವಾಗಿ ಸ್ವಲ್ಪದರಲ್ಲಿ ಹೋಲಿಕೆ ಮೂಲಕ ಯಾಜ್ಞವಲ್ಕ್ಯರು ತಿಳಿಸಿಕೊಟ್ಟರು.

ಹೊರಗಿನ ವ್ಯವಹಾರಗಳಿಗೆ ಆಗಲಿ ಅಥವಾ ಮಾನಸಿಕ ಕ್ರಿಯೆಗಳಿಗಾಗಲಿ ಬೆಳಕೆಂಬುದು ಬೇಕೇ ಬೇಕು. ಬೆಳಕು ಸ್ವಯಂ
ಪ್ರಕಾಶಗೊಳ್ಳುವಂಥದ್ದಿರಬೇಕು. ಅಂತಹ ಬೆಳಕೇ ಪರಬ್ರಹ್ಮ, ಆತನೇ ಪರಂಜ್ಯೋತಿ. ಸೂರ್ಯ, ಚಂದ್ರ, ನಕ್ಷತ್ರ, ಬೆಂಕಿ, ವಿದ್ಯುತ್‌ ಮಿಂಚು, ದೀಪ ಇವುಗಳೆಲ್ಲ ಪ್ರಾಕೃತಿಕವಾಗಿರುವ ಜ್ಯೋತಿಗಳು. ನಾವು ಮನೆಗಳಲ್ಲಿ ಹಚ್ಚುವ ದೀಪಗಳು ಆ ಪರಂಜ್ಯೋತಿಯ ಪ್ರತೀಕಗಳು. ಅವುಗಳನ್ನು ಪೂಜಿಸುವುದು, ಗೌರವಿಸುವುದು ಪರಂಜ್ಯೋತಿಗೆ ನಾವು ಸಲ್ಲಿಸಬಹುದಾದ ಪ್ರಾಥಮಿಕ ಪೂಜೆ. ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಸ್ವಸ್ತಿಕ ಬರೆಯುವುದರಿಂದ ಭೂತಣ್ತೀವೂ ಮತ್ತು ಕಲಶ ಸ್ಥಾಪನೆಯಿಂದ ಜಲತಣ್ತೀವೂ ಅರ್ಚಿಸಲ್ಪಡುತ್ತದೆ.

ಕತ್ತಲೆಗೆ ತಮಸ್ಸು ಎಂಬುದಾಗಿ ಹೆಸರಿದೆ. ದೀಪ ಉರಿಯುತ್ತಿದ್ದರೆ ಉರಿಯುವ ದೀಪದ ಮೂಲದಲ್ಲಿ ಬ್ರಹ್ಮನೂ, ಮಧ್ಯದಲ್ಲಿ ವಿಷ್ಣುವೂ ಮತ್ತು ತುದಿಯಲ್ಲಿ ಶಿವನೂ ಸನ್ನಿಹಿತರಾಗಿರುತ್ತಾರೆ ಎಂಬುದು ಶ್ಲೋಕದ ಅರ್ಥ. ದೇವರೆಲ್ಲ ಒಬ್ಬನೇ ಆದರೂ ನಾವು ಬಯಸುವ ರೂಪಗಳಲ್ಲಿ ನಮಗೆ ತೋರ್ಪಡಿಸಿಕೊಳ್ಳುವುದು ಅಥವಾ ನಾವು ಆತನನ್ನು ಆರಾಧಿಸುವುದು ನಡೆಯುತ್ತದೆ.

ಸನಾತನ ಜೀವನ ಧರ್ಮದ ಎಲ್ಲ ಧಾರ್ಮಿಕ ವಿಧಿಗಳಲ್ಲೂ ನಡೆಯಬೇಕಾದ ಪ್ರಥಮ ಕಾರ್ಯ ದೀಪ ಬೆಳಗುವುದು. ಬೆಳಕು ಕತ್ತಲೆಯ ವೈರಿ. ಬೆಳಕು ಹರಿಸುವುದರಿಂದ ಮನಸ್ಸು ಅರಳಿ ಪ್ರಫುಲ್ಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next