Advertisement
ಬೆಳಕಿನ ಹಬ್ಬದ ಪರಿಕಲ್ಪನೆಯೇ ಅಜ್ಞಾನದಿಂದ ಸುಜ್ಞಾನದ ಕಡೆಗೆ ಹೋಗುವಂತಹದ್ದಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಆಚರಣೆ ಕೂಡ ಸುಜ್ಞಾನ ಎಂಬ ಬೆಳಕಿನೆಡೆ ಸಾಗುವುದಾಗಿರಬೇಕೆ ಹೊರತು, ನಮ್ಮನ್ನು ಅಂಧಕಾರಕ್ಕೆ ತಳ್ಳುವಂತಿರಬಾರದು. ದುರದೃಷ್ಟವಶಾತ್ ನಮ್ಮ ಆಚರಣೆ ಈಚಿನ ವರ್ಷಗಳಲ್ಲಿ ಹಾಗೇ ಆಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಪಟಾಕಿಗೂ ಮತ್ತು ದೀಪಾವಳಿಗೂ ಅವಿನಾಭಾವ ಸಂಬಂಧ ಇರಬಹುದು. ಆದರೆ, ಈಗ ಆ ಪಟಾಕಿಗಳಿಂದ ಅನೇಕ ಅವಾಂತರಗಳು ಸೃಷ್ಟಿಯಾಗುತ್ತಿವೆ. ಉದಾಹರಣೆಗೆ ಈಚೆಗೆ “ಅತ್ತಿಬೆಲೆ ದುರಂತ’ದಿಂದ 17 ಜನ ಸಾವನ್ನಪ್ಪಿದ್ದು ಇನ್ನೂ ಹಸಿಯಾಗಿದೆ. ಈ ಮಧ್ಯೆಯೂ ಅಕ್ರಮ ದಾಸ್ತಾನು ಮುಂದುವರಿದಿದೆ. ಅಂತಹವರ ವಿರುದ್ಧ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯಾಚರಣೆಯನ್ನೂ ಮಾಡುತ್ತಿದ್ದು, ಹತ್ತಾರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತೂಂದೆಡೆ ರಾಷ್ಟ್ರ ರಾಜಧಾನಿ ದೆಹಲಿ ವಾಯುಮಾಲಿನ್ಯದಿಂದ ಇಡೀ ನಗರದಲ್ಲಿ ಗ್ಯಾಸ್ ತುಂಬಿಕೊಂಡಂತಾಗಿದೆ. ಇದೆಲ್ಲವನ್ನೂ ನಾವು ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿಗೆ ಸಜ್ಜಾಗಬೇಕು. ಸರ್ಕಾರ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯು ಶಬ್ದ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕೆ ಹತ್ತು ಹಲವು ನಿಯಮಗಳು ಮತ್ತು ನಿರ್ಬಂಧಗಳನ್ನು ವಿಧಿಸಬಹುದು. ಅವುಗಳ ಪಾಲನೆಗೆ ಬಿಗಿ ಕ್ರಮವನ್ನೂ ತೆಗೆದುಕೊಳ್ಳಬಹುದು. ಆದರೆ, ಜನರ ಸಹಕಾರ ಇಲ್ಲದೆ ಯಶಸ್ಸು ಸಾಧ್ಯವಿಲ್ಲ. ಈಚೆಗೆ ಗಣೇಶ ಚತುರ್ಥಿ ಆಚರಿಸಲಾಯಿತು. ಇದೇ ಮೊದಲ ಬಾರಿಗೆ ಶೇ.75 ಗಣೇಶನ ಪ್ರತಿಷ್ಠಾಪನೆಗಳು ಪರಿಸರ ಸ್ನೇಹಿಯಾಗಿದ್ದವು. ಇದು ಸಾಧ್ಯವಾಗಿದ್ದು ಜನರ ಸಹಕಾರದಿಂದ ಮಾತ್ರ. ಇದೇ ಸ್ಪಂದನೆ ದೀಪಾವಳಿ ಸಂದರ್ಭದಲ್ಲೂ ದೊರೆಯಬೇಕಿದೆ. ಒಂದೆಡೆ ಅರಿವು ಮೂಡಿಸುವ ಕೆಲಸ ಜನಾಂದೋಲನ ರೀತಿ ಆಗುತ್ತಿದೆ. ಈ ಬಾರಿಯ ದೀಪಾವಳಿಯು ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸ ಇದೆ ಎನ್ನುತ್ತಾರೆ ಅರಣ್ಯ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ.
Related Articles
Advertisement
ಪಟಾಕಿ ಶಬ್ದ ಮತ್ತು ವಾಯುಮಾಲಿನ್ಯ ಉಂಟುಮಾಡುತ್ತದೆ. ಪರಿಸರದ ಜತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗೆಯೇ, ಪ್ರಾಣಿ-ಪಕ್ಷಿಗಳ ಕಲರವಕ್ಕೂ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ನಾವೆಲ್ಲರೂ ಪರಿಸರ ಸ್ನೇಹಿಯಾಗಿ, ಸರಳ ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ದೀಪಾವಳಿ ಆಚರಿಸೋಣ. ಈಗಾಗಲೇ ಕೇಂದ್ರ ಸರ್ಕಾರ ಸ್ವತ್ಛ ಭಾರತ ಯೋಜನೆ ಅಡಿ “ಸ್ವಚ್ಛ ದೀಪಾವಳಿ-ಶುಭ ದೀಪಾವಳಿ’ ಎಂಬ ಪ್ರಚಾರ ಕಾರ್ಯ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಕೈ ಜೋಡಿಸಿ.– ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತರು.
ದೀಪಾವಳಿ ದೀಪಗಳನ್ನು ಬೆಳಗಿಸಿ ಆಚರಿಸುವುದು ಹೆಚ್ಚು ಅರ್ಥಪೂರ್ಣ. ಹೆಚ್ಚು ಸದ್ದು ಮಾಡುವ ಪಟಾಕಿಗಳನ್ನು ಸಿಡಿಸುವುದರಲ್ಲಿ ಅರ್ಥವಿಲ್ಲ. ನಮ್ಮ, ಪ್ರಾಣಿ- ಪಕ್ಷಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಈ ಪಟಾಕಿಗಳನ್ನು ಸುಡುವುದರಿಂದ ಉಂಟಾಗುವ ಹೊಗೆ ಆರೋಗ್ಯಕ್ಕೆ ಬಹಳ ಅಪಾಯಕಾರಿ. ರಸ್ತೆಗಳಲ್ಲಿ, ಜನರು ಓಡಾಡುವ ಸ್ಥಳಗಳಲ್ಲಿ ಪಟಾಕಿ ಹೊಡೆಯುವುದರಿಂದ ಗಂಭೀರ ಸಮಸ್ಯೆಗಳಾಗುತ್ತವೆ. ಕಣ್ಣನ್ನೇ ಕಳೆದುಕೊಂಡ ಘಟನೆಗಳೂ ಇವೆ. ಆದ್ದರಿಂದ ದೀಪಗಳನ್ನು ಬೆಳಗಿ ಸುರಕ್ಷಿತವಾಗಿ ದೀಪಾವಳಿ ಆಚರಿಸಿ. – ಬಿ.ಸಿ.ಸುರೇಶ್, ಧ್ಯಾನ್‌ಚಂದ್ ಕ್ರೀಡಾಪ್ರಶಸ್ತಿ ವಿಜೇತ, ಕಬಡ್ಡಿ ತಾರೆ.
ಪಟಾಕಿ ಬಳಕೆ ಕಡಿಮೆ ಮಾಡುವುದರಲ್ಲಿ ಸರ್ಕಾರ ಮತ್ತು ಜನರ ಜವಾಬ್ದಾರಿ ಸಮಾನವಾಗಿದೆ. ಸರ್ಕಾರ ನಿಧಾನವಾಗಿ ಪಟಾಕಿ ಮಾರಾಟ ನಿಯಂತ್ರಿಸಿ, ಆನಂತರ ನಿಷೇಧಿಸುವುದು ಒಳ್ಳೆಯದು. ಜನರು ಕೂಡ ಸ್ವ ಇಚ್ಛೆಯಿಂದ ಪಟಾಕಿ ಸಿಡಿಸುವುದು ಕಡಿಮೆ ಮಾಡಿದ್ರೆ ಪಟಾಕಿ ಬೇಡಿಕೆ, ಬಳಕೆ ತನ್ನಿಂದ ತಾನೇ ಕಡಿಮೆಯಾಗುತ್ತದೆ. ದೀಪಾವಳಿ ಮಾತ್ರವಲ್ಲ, ಯಾವುದೇ ಹಬ್ಬ, ಸಂಭ್ರಮ, ಕಾರ್ಯಕ್ರಮಗಳಲ್ಲಿ ಪಟಾಕಿ ಬಳಕೆ ಕಡಿಮೆ ಮಾಡಬೇಕು. ಈ ಬಾರಿ ಪಟಾಕಿಗಳಿಲ್ಲದೆ ದೀಪಾವಳಿ ಆಚರಿಸೋಣ.– ಡಾರ್ಲಿಂಗ್ ಕೃಷ್ಣ, ನಟ.
ಇತ್ತೀಚೆಗೆ ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸದೆ ಪಟಾಕಿ ಹೊಡೆಯುವ ಅಭ್ಯಾಸ ಬೆಳೆದಿದೆ. ಸಾರ್ವಜನಿಕ ಸ್ಥಳ, ಜನ ಓಡಾಡುವ ರಸ್ತೆಗಳಲ್ಲಿ ಬೇಕೆಂದೇ ಪಟಾಕಿ ಹೊಡೆಯಲಾಗುತ್ತಿದೆ. ಇದರಿಂದ ವಾಹನ ಸವಾರರಿಗೆ, ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆ ಆಗುತ್ತದೆ. ದಯವಿಟ್ಟು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಯಾರಿಗೂ ತೊಂದರೆ, ಪರಿಸರ ಮಾಲಿನ್ಯ ಆಗದಂತೆ ನೋಡಿಕೊಳ್ಳಿ. – ಗುರುರಾಜ ಪೂಜಾರಿ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ವೇಟ್‌ಲಿಫ್ಟರ್.
ಪಟಾಕಿ ಸಿಡಿಸದೇ ದೀಪಾವಳಿ ಆಚರಿಸೋಣ: ಮೊದಲಿನಿಂದಲೂ ಪಟಾಕಿಯಿಂದ ನಾನು ದೂರ. ಬಾಲ್ಯದಿಂದ ಪಟಾಕಿಗಳನ್ನು ಸಿಡಿಸದೆಯೇ ದೀಪಾವಳಿ ಆಚರಿಸಿಕೊಂಡು ಬಂದಿದ್ದೇನೆ. ಹಾಗಾಗಿ ನನಗೆ ಪಟಾಕಿಗಳು ಇರಲಿ, ಇಲ್ಲದಿರಲಿ ನನ್ನ ದೀಪಾವಳಿ ಸಡಗರದಲ್ಲಿ ಅಂಥದ್ದೇನೂ ವ್ಯತ್ಯಾಸ ಕಾಣುವುದಿಲ್ಲ. ನಮ್ಮ ಖುಷಿಗೆ ಹೊಡೆಯುವ ಪಟಾಕಿಗಳು ನಮ್ಮ ಸುತ್ತಮುತ್ತಲಿರುವ ಪರಿಸರ ಹಾಳು ಮಾಡುವುದಾದರೆ ಅಂಥ ಪಟಾಕಿ ಹೊಡೆದು ಸಂಭ್ರಮಿಸುವ ಅಗತ್ಯವೇನಿದೆ? ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕೆ ನಾವೆಲ್ಲರೂ ಕಾರಣರಾಗುತ್ತಿದ್ದೇವೆ. ನಾವು ಖುಷಿಯಿಂದ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ ಕೂಡ ಪರಿಸರ ಹಾಳು ಮಾಡಲು ಕಾರಣವಾಗಬಾರದು. ಆದಷ್ಟು ಪಟಾಕಿಗಳನ್ನು ಬಳಸದೇ ದೀಪಾವಳಿ ಆಚರಿಸೋಣ ಎಂದು ಹೇಳುತ್ತಾರೆ ನಟಿ ಬೃಂದಾ ಆಚಾರ್ಯ.
ದೀಪಗಳನ್ನು ಬೆಳಗಿ ಬೆಳಕನ್ನು ತರುವುದೇ ದೀಪಾವಳಿಯ ವೈಶಿಷ್ಟ್ಯ. ಅಂತಹ ಹಬ್ಬದಂದು ಕಣ್ಣಿಗೆ ತೊಂದರೆ ಮಾಡಿಕೊಂಡು ಬೆಳಕನ್ನು ನೋಡದಂತಾಗುವುದು ದೊಡ್ಡ ದುರಂತ. ಸದ್ಯ ಬಳಸುವ ಪಟಾಕಿಗಳಿಂದ ವಾಯುಮಾಲಿನ್ಯ ಹೆಚ್ಚಾಗು ತ್ತಿದೆ. ದೆಹಲಿಯಲ್ಲಿ ಈಗಾ ಗಲೇ ಕೆಟ್ಟ ಪರಿಸ್ಥಿತಿಯಿದೆ. ಅಂತಹ ಸ್ಥಿತಿ ಕರ್ನಾಟಕದಲ್ಲೂ ಉಂಟಾಗಬಾರದು. ಪಟಾಕಿಯನ್ನೇ ಬಳಸಬಾರದೆಂದು ನಾನು ಹೇಳುವುದಿಲ್ಲ. ಆದರೆ, ಮಾಲಿನ್ಯಕ್ಕೆ ಕಾರಣವಾಗದಂತೆ ಕ್ರಮ ತೆಗೆದುಕೊಳ್ಳಬೇಕು.– ಕೆ.ವೈ.ವೆಂಕಟೇಶ್, ಪದ್ಮಶ್ರೀ ಪುರಸ್ಕೃತ, ಕ್ರೀಡಾಪಟು
ಪಟಾಕಿ ಹೊಡೆಯುವುದರಿಂದಲೇ ದೀಪಾವಳಿ ಆಚರಣೆ ಮಾಡಬೇಕು ಎಂಬ ಕಲ್ಪನೆ ತಪ್ಪು. ಸಂತೋಷಕ್ಕೆ, ಸಂಭ್ರಮಕ್ಕೆ ಹೊಡೆಯುವ ಪಟಾಕಿ ನಮ್ಮ ಸುತ್ತಮುತ್ತಲಿನ ಅದೆಷ್ಟೋ ಜನರನ್ನು ಕತ್ತಲಿಗೆ ತಳ್ಳುತ್ತದೆ. ಪ್ರತಿವರ್ಷ ಪಟಾಕಿಗಳಿಂದ ಎಷ್ಟೋ ಮಕ್ಕಳು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ವಯಸ್ಸಾದವರ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ಶಬ್ಧ, ವಾಯು ಮಾಲಿನ್ಯದಿಂದ ಜನ, ಪ್ರಾಣಿ-ಪಕ್ಷಿಗಳು ಎಲ್ಲರಿಗೂ ತೊಂದರೆಯಾಗುತ್ತದೆ. ಸಂಭ್ರಮ, ಆಚರಣೆಗಳ ಹೆಸರಿನಲ್ಲಿ ಪ್ರಕೃತಿ ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. – ನೀನಾಸಂ ಸತೀಶ್, ನಟ.