Advertisement

ಬೆಳಕಿನ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸಹ ವಾಸ

10:12 PM Oct 28, 2019 | Sriram |

ಹಣತೆಯ ಬೆಳಕು ಎಲ್ಲೆಲ್ಲೂ
ಬೆಳಕಿನ ಹಬ್ಬವನ್ನು ಪ್ರತಿ ವರ್ಷವೂ ನಾವೆಲ್ಲ ಒಟ್ಟಾಗಿ ಸ್ವಾಗತಿಸುತ್ತೇವೆ. ಒಟ್ಟು 24 ಫ್ಲ್ಯಾಟ್ ಗಳ ಪೈಕಿ ಸುಮಾರು 50 ಮಂದಿ ಸೇರಿಕೊಂಡು ಹಬ್ಬವನ್ನು ಆಚರಿಸುವುದೇ ಬದುಕಿನಲ್ಲಿ ಮತ್ತಷ್ಟು ಸಂಭ್ರಮವನ್ನು ತುಂಬಿಕೊಳ್ಳುವುದಕ್ಕಾಗಿಯೇ. ವಾರದ ಹಿಂದೆಯೇ ನಾವೆಲ್ಲಾ ಹೊಸ ಬಟ್ಟೆ ಖರೀದಿಸಿದ್ದೆವು. ವಂತಿಗೆ ಸಂಗ್ರಹಿಸಿ ಒಟ್ಟಾಗಿ ಹಬ್ಬ ಆಚರಿಸುವುದು ಇಲ್ಲಿಯ ಕ್ರಮ. ಹೊರ ಊರಿನವರೇ ಅಧಿಕವಾಗಿರುವ ಕಾರಣ ಶುಕ್ರವಾರವೇ ನಮ್ಮಲ್ಲಿ ದೀಪಾವಳಿ.


ಆ ದಿನ ಸಂಜೆ ಎಲ್ಲರಿಗೂ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅನ್ನ, ಸಾರು, ಶ್ಯಾವಿಗೆ ಪಾಯಸ, ಹೋಳಿಗೆ, ಸಿಹಿ ತಿನಿಸುಗಳಿದ್ದವು. ಕೆಲವರು ತಮ್ಮ ಫ್ಲ್ಯಾಟ್‌ಗಳ ಒಳಭಾಗವನ್ನು ವಿದ್ಯುತ್‌ ದೀಪಗಳು, ಹಣತೆಯ ದೀಪಗಳ ಮೂಲಕ ಸಿಂಗರಿಸಿದ್ದರು. ಹಲವು ಮಂದಿ ಮನೆ ಎದುರು ಗೂಡುದೀಪವನ್ನು ನೇತು ಹಾಕಿದ್ದಾರೆ. ನಮ್ಮಲ್ಲಿ ಪಟಾಕಿ ಸಿಡಿಸದೇ ಸಿಹಿ ಹಂಚಿಕೆ, ಬೆಳಕಿನ ವೈಭವವನ್ನು ಕಣ್ತುಂಬಿಕೊಳ್ಳುವ ಮೂಲಕ ಹಬ್ಬ ಆಚರಿಸಿದೆವು.
-ಫೆಲಿಕ್ಸ್‌  , ಅಜಯ್‌ ಎಂಪೈರ್‌ ಅಪಾರ್ಟ್‌ಮೆಂಟ್‌ ಕಾಡಬೆಟ್ಟು

Advertisement

ಕ್ರೀಡೆ,ಸಾಂಸ್ಕೃತಿಕ ಸ್ಪರ್ಧೆ
ನಮ್ಮ ಸಮುತ್ಛಯದಲ್ಲಿ ಹಬ್ಬ ನಡೆದದ್ದು ಮಹಿಳೆಯರ ನೇತೃತ್ವದಲ್ಲಿ. ಸಿದ್ದತೆಗೆ ಬೇಕಿರುವ ಎಲ್ಲ ಯೋಜನೆಗಳನ್ನು ಅವರೇ ರೂಪಿಸಿದರು. ಎಲ್ಲ ಫ್ಲ್ಯಾಟ್‌ಗಳನ್ನೂ ಅಲಂಕರಿಸಲಾಗಿತ್ತು.


ಮಕ್ಕಳು, ಮಹಿಳೆಯರು, ಹಿರಿಯರಿಗೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮನೆಮುಂದೆ ರಂಗೋಲಿ ಹಾಕುವ ಸ್ಪರ್ಧೆ, ಫ್ಯಾಮಿಲಿ ಫೋಟೋ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ನೀಡಲಾಯಿತು. ಸಂಜೆ ಎಲ್ಲರಿಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಆಚರಣೆಗೆ ಸಂಬಂಧಿಸಿದ ಎಲ್ಲ ಖರ್ಚುವೆಚ್ಚಗಳನ್ನೂ ಎಂದಿನಂತೆ ಅಪಾರ್ಟ್‌ಮೆಂಟ್‌ನ ಓನರ್ ಅಸೋಸಿಯೇಷನ್ಸ್‌ ನವರು ಭರಿಸಿದರು. ಈ ಮೂಲಕ ನಮ್ಮ ಸಂಭ್ರಮಾಚರಣೆಗೆ ಮತ್ತಷ್ಟು ಖುಷಿ ತುಂಬಿದರು. ಪ್ರತೀ ಮನೆಯವರು ಮಾಡಿದ ಸಿಹಿತಿನಿಸುಗಳ ವಿನಿಮಯವೂ ನಡೆಯಿತು.
-ದೇವಾನಂದ ಉಪಾಧ್ಯಾಯ, ವೈಜಯಂತಿ ಕಾಮತ್‌, ಜನಾರ್ದನ ಹೈಟ್ಸ್ , ಅಂಬಲಪಾಡಿ

ಉದಯವಾಣಿ ವೇದಿಕೆ ಒದಗಿಸಿದ್ದು ವಿಶೇಷ
ನಾವೆಲ್ಲಾ ಒಂದಾಗಲು ಇರುವ ಅತ್ಯಂತ ಒಳ್ಳೆಯ ಸಂದರ್ಭವಿದು. ಅದು ಕೈ ತಪ್ಪಿ ಹೋಗಲು ಎಂದಿಗೂ ಬಿಡುವುದಿಲ್ಲ ಎನ್ನುವ ಈ ವಸತಿ ಸಮುತ್ಛಯದ ನಿವಾಸಿಗಳು ಈ ಬಾರಿಯ ದೀಪಾವಳಿಯನ್ನೂ ಸಂಭ್ರಮದಿಂದ ಆಚರಿಸಿದರು. ಹಬ್ಬಕ್ಕಾಗಿ ವಾರದ ಹಿಂದೆಯೇ ಹೊಸ ಬಟ್ಟೆಗಳನ್ನು ಖರೀದಿಸಲಾಗಿತ್ತು.


ಹಬ್ಬದ ದಿನದಂದು ಧರಿಸಿ ಸಂಭ್ರಮಿಸಿದ್ದೂ ಆಯಿತು. ಕಡುಬು, ಅವಲಕ್ಕಿ, ಪಾಯಸ, ಕೋಡುಬಳೆಗಳನ್ನು ಮಾಡಿ ಉಳಿದವರೊಂದಿಗೂ ಹಂಚಿಕೊಂಡೆವು. ಈ ಬಾರಿ ಹೊಸತಾಗಿ ಹೋಳಿಗೆ ಮಾಡಿದ್ದು ವಿಶೇಷ. ಎಲ್ಲರೂ ಬಹಳ ಇಷ್ಪ ಪಟ್ಟರು. ಗೂಡುದೀಪ, ರಂಗೋಲಿಗಳೆಲ್ಲಾ ನಮ್ಮೆಲ್ಲರ ಮನೆಯನ್ನೂ ಸಿಂಗರಿಸಿದ್ದವು. ಎಲ್ಲರೂ ಸೇರಿ ಹಣತೆ ದೀಪ ಇಟ್ಟು ಮನೆ ಬೆಳಗಿದೆವು. ನಮ್ಮ ಸಂಭ್ರಮಕ್ಕೆ ಪಕ್ಕದ ಅಪಾರ್ಟ್‌ಮೆಂಟ್‌ನ ನಿವಾಸಿಗಳೂ, ಬೇರೆ ಧರ್ಮದವರೂ ಕೈ ಜೋಡಿಸಿದರು. ಈ ಬಾರಿ ಉದಯವಾಣಿಯ “ಸಹ ವಾಸ-ಸಮ್ಮಿಲನ ದೀಪಾವಳಿ’ ಪರಿಕಲ್ಪನೆಗೆ ಎಲ್ಲರೂ ಒಂದಾಗಿ ದೀಪದ ಎದುರು ನಿಂತು ಛಾಯಾಚಿತ್ರ ತೆಗೆದುಕೊಂಡಿರುವುದು ವಿಶೇಷ. ಈ ಹಿಂದೆ ಅದೆಷ್ಟೋ ಸಂಭ್ರಮಾಚರಣೆ ಮಾಡುತ್ತಿದ್ದರೂ ಅದನ್ನು ಛಾಯಾಚಿತ್ರದ ಮೂಲಕ ದಾಖಲಿಸುತ್ತಿರಲಿಲ್ಲ. ಈ ಬಾರಿ ನಮಗೆ ಅದಕ್ಕೆ ಅವಕಾಶ ಒದಗಿ ಬಂದಿತು.
-ಲತಾ ಹರಿಶ್ಚಂದ್ರ, ಸಹರಾ ಹೋಮ್ಸ್‌, ಅಂಬಲಪಾಡಿ

ಸಂಭ್ರಮ ವಿನಿಮಯಕ್ಕೊಂದು ವೇದಿಕೆ
ಹಬ್ಬ ಸಂಭ್ರಮದ ಪರಸ್ಪರ ವಿನಿಮಯಕ್ಕೊಂದು ವೇದಿಕೆ. 28 ಫ್ಲ್ಯಾಟ್‌ಗಳಲ್ಲಿರುವ ಈ ಸಮುತ್ಛಯದಲ್ಲಿ ಮಕ್ಕಳ ಸಂಖ್ಯೆ ಕೊಂಚ ಹೆಚ್ಚು. ಮೂರು ದಿನಗಳಿಂದಲೂ ಮಕ್ಕಳಿಗೆ ಹೊಸ ಬಟ್ಟೆ ಧರಿಸುವುದೇ ಸಂತಸ.


ಮನೆಯವರಿಗೆ ಹೊಸಬಗೆಯ ತಿಂಡಿತಿನಿಸು ತಯಾರಿಸುವ ತವಕ. ಮಾಡಿದ ತಿನಿಸುಗಳನ್ನು ಅಕ್ಕಪಕ್ಕದ ನಿವಾಸಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಸಂಭ್ರಮವನ್ನೂ ವಿನಿಮಯ ಮಾಡಿಕೊಳ್ಳಲಾಯಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆ. ಆದರೂ ಕೆಲವು ಮಕ್ಕಳು ಶಬ್ದ ರಹಿತ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಅನ್ಯಧರ್ಮದವರೂ ನಮ್ಮೊಂದಿಗೆ ಸೇರಿಕೊಂಡಿದ್ದು ಹಬ್ಬ ಆಚರಣೆಗೆ ಮತ್ತಷ್ಟು ಮೆರುಗು ತುಂಬಿತು. ನಮ್ಮ ನೌಕರರಿಗೂ ಸಿಹಿತಿಂಡಿ ಹಂಚಿ, ಕೆಲವರು ಹೊಸ ಬಟ್ಟೆ ಕೊಟ್ಟು ತಮ್ಮ ಸಂಭ್ರಮದಲ್ಲಿ ಅವರನ್ನೂ ಪಾಲುದಾರರನ್ನಾಗಿಸಿದರು. ಅಪಾರ್ಟ್‌ಮೆಂಟ್‌ ಹೊರಭಾಗದಲ್ಲಿ ಹಾಕಿದ ಗೂಡುದೀಪ ಎಲ್ಲೆಡೆ ರಾರಾಜಿಸಿತು.
-ಪದ್ಮಾ ಭಟ್‌, ಕಲ್ಕೂರ ಕ್ಲಾಸಿಕ್‌ ಅಪಾರ್ಟ್‌ಮೆಂಟ್‌, ಕಡಿಯಾಳಿ

Advertisement

Udayavani is now on Telegram. Click here to join our channel and stay updated with the latest news.

Next