ಹುಬ್ಬಳ್ಳಿ: ರಾಯನಾಳ ಗ್ರಾ.ಪಂ ಸದಸ್ಯ ದೀಪಕ ಪಟದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬಾಗಲಕೋಟೆ ಸಮೀಪದಲ್ಲಿ ವಶಕ್ಕೆ ಪಡೆದಿದ್ದಾರೆ.
ರುದ್ರಪ್ಪ ಮೇಟಿ ಹಾಗೂ ಯಲ್ಲಪ್ಪ ಮೇಟಿಯನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಜು. 4ರಂದು ರಾತ್ರಿ ರಾಯನಾಳ ಬಳಿ ಗಂಗಿವಾಳದ ದೀಪಕ ಪಟದಾರಿ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ಆರು ಜನರನ್ನು ಬಂಧಿಸಿದ್ದರು. ಆದರೆ, ಈ ಹತ್ಯೆಗೆ ಪ್ರಮುಖ ಕಾರಣ ಮೇಟಿ ಕುಟುಂಬದ ಇನ್ನು ಮೂವರು ಕಾರಣವೆಂದು ಆರೋಪಿಸಿ ಅವರ ಪತ್ನಿ ಪುಷ್ಪಾ ಪಟದಾರಿ ಹಳೇಹುಬ್ಬಳ್ಳಿ ಠಾಣೆ ಎದುರು ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ:ಸುಪ್ರೀಂಗೆ ನೂತನ ಸಿಜೆಐ ಹೆಸರು ಶಿಫಾರಸು ಮಾಡಿ: ಹಾಲಿ ಸಿಜೆಐ ಲಲಿತ್ ಗೆ ಕೇಂದ್ರದ ಪತ್ರ
ಅಷ್ಟೇ ಅಲ್ಲದೆ ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಮುಖ್ಯಮಂತ್ರಿ ಮತ್ತು ಡಿಐಜಿ ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದರು. ರಾಜ್ಯ ಸರಕಾರ ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು.
ಅಧಿಕಾರಿಗಳ ತಂಡವು ಪ್ರಕರಣದ ವಿಚಾರಣೆ ನಡೆಸುತ್ತಿರುವಾಗಲೇ ಸೆ. 28ರಂದು ರಾತ್ರಿ ಪುಷ್ಪಾ ಪಟದಾರಿ ನವನಗರದ ಸಿಟಿ ಪಾರ್ಕ್ ನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಹತ್ಯೆಗೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಮೇಟಿ ಕುಟುಂಬದ ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.