ಮುಂಬಯಿ: ಶುಕ್ರವಾರ ಐಪಿಎಲ್ ಕೂಟಕ್ಕೆ ತ್ರಿವಳಿ ಆಘಾತ ಎದುರಾಗಿದೆ. ಗಾಯದ ಸಮಸ್ಯೆಗೆ ಸಿಲುಕಿದ್ದ ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಆಲ್‌ರೌಂಡರ್ ದೀಪಕ್ ಚಹರ್ ಅವರು ಕೂಟದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.
ಕೋಲ್ಕತಾ ನೈಟ್‌ರೈಡರ್ ನ ವೇಗಿ ರಾಸಿಖ್ ಸಲಾಂ ಕೂಡ ಗಾಯಾಳಾಗಿ ಕೂಟದಿಂದ ನಿರ್ಗಮಿಸಿದ್ದಾರೆ.
ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ನ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ!
ಮಂಡಿ ನೋವಿನಿಂದಾಗಿ ದೀಪಕ್ ಚಹರ್ ಕೂಟದಿಂದ ಹೊರಬಿದ್ದಿದ್ದಾರೆ ಎಂದು ಐಪಿಎಲ್ ಪ್ರಕಟನೆ ತಿಳಿಸಿದೆ.
ಕೆಕೆಆರ್ ವೇಗಿ ರಾಸಿಖ್ ಸಲಾಂ ಬೆನ್ನುನೋವಿನ ಸಮಸ್ಯೆಗೆ ಸಿಲುಕಿದ್ದು, ಅವರು ಕೂಟದಿಂದ ಬೇರ್ಪಡುವುದು ಅನಿವಾರ್ಯವಾಗಿದೆ. ಇವರ ಬದಲು ದಿಲ್ಲಿಯ ಯುವ ವೇಗಿ ಹರ್ಷಿತ್ ರಾಣಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಸಲಾಂ ಈ ಐಪಿಎಲ್‌ನಲ್ಲಿ ಕೆಕೆಆರ್ ಪರ ಎರಡು ಪಂದ್ಯಗಳನ್ನು ಆಡಿದ್ದರು. ಬದಲಿ ಆಟಗಾರ ಹರ್ಷಿತ್ ರಾಣಾ ಅವರೊಂದಿಗೆ ಕೆಕೆಆರ್ 20 ಲಕ್ಷ ರೂ. ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ:ಎಫ್ಐಎಚ್ ಪ್ರೊ ಲೀಗ್ ಹಾಕಿ: ಜರ್ಮನಿಯೆದುರು ಭಾರತಕ್ಕೆ ಗೆಲುವು
ಫರ್ಹಾರ್ತ್‌ಗೆ ಸೋಂಕು
ಟೀಮ್ ಇಂಡಿಯಾದ ಫಿಸಿಯೋ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಯಾಟ್ರಿಕ್ ಫರ್ಹಾರ್ತ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಫ್ರಾಂಚೈಸಿಯ ವೈದ್ಯಕೀಯ ತಂಡ ಅವರ ಬಗ್ಗೆ ತೀವ್ರ ನಿಗಾ ವಹಿಸುತ್ತಿದೆ. ಸದ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್‌ಗೆ ಕೋವಿಡ್ ಅಪಾಯ ಎದುರಾಗಲೂಬಹುದು.
ಕಳೆದ ವರ್ಷ ಎರಡನೇ ಅಲೆ ತೀವ್ರಗೊಂಡಾಗ ಐಪಿಎಲ್ ಕೂಟವನ್ನು ಅಮಾನತುಗೊಳಿಸಲಾಗಿತ್ತು.