ಬೆಂಗಳೂರು: ದಟ್ಟ ಮಂಜು ಆವರಿಸಿದ್ದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕೇವಲ ವಾರದ ಅಂತರದಲ್ಲಿ 8 ವಿಮಾನಗಳ ಹಾರಾಟ ರದ್ದಾಗಿದೆ. ಜತೆಗೆ 102 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.
ಶನಿವಾರ ಬೆಳಗಿನಜಾವ ನಿಲ್ದಾಣದ ಸುತ್ತ ದಟ್ಟ ಮಂಜು ಕವಿದಿದ್ದರಿಂದ 44 ವಿಮಾನಗಳ ಆಗಮನ ಮತ್ತು 58 ವಿಮಾನಗಳ ನಿರ್ಗಮನದಲ್ಲಿ ಸುಮಾರು ಎರಡು-ಮೂರು ತಾಸು ವಿಳಂಬವಾಯಿತು. ಇದಲ್ಲದೆ, ನಾಲ್ಕು ಆಗಮನ ಮತ್ತು ನಾಲ್ಕು ನಿರ್ಗಮನ ಸೇರಿ ಇಂಡಿಗೊಗೆ ಸೇರಿದ ಎಂಟು ವಿಮಾನಗಳ ಹಾರಾಟ ರದ್ದುಗೊಂಡಿತು. ಹಾಗೂ ಮೂರು ವಿಮಾನಗಳು ಚೆನ್ನೈ ನಿಲ್ದಾಣದತ್ತ ಮುಖಮಾಡಿದವು. ಪರಿಣಾಮ ಪ್ರಯಾಣಿಕರು ಪರದಾಡಿದರು.
ದೂರದ ರಾಜ್ಯಗಳಿಗೆ ತಲುಪಬೇಕಿದ್ದ ಪ್ರಯಾಣಿಕರಿಗೆ ಬೆಳಿಗ್ಗೆ 10ರ ನಂತರ ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲಾಯಿತು. ಕೆಲವರಿಗೆ ಪ್ರಯಾಣ ದರವನ್ನು ಮರಳಿಸಲಾಯಿತು. ಇದರಿಂದ ಹೊಸ ವರ್ಷಾಚರಣೆಗೆ ಹೊರಟಿದ್ದ ಪ್ರಯಾಣಿಕರು ಅಡಚಣೆಯಾಯಿತು. ಕೆಲವೇ ದಿನಗಳ ಅಂತರದಲ್ಲಿ ಸತತ ಎರಡನೇ ಬಾರಿ ಈ ರೀತಿ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
ಕಾಣುತ್ತಿದ್ದುದು ಕೇವಲ 50 ಮೀ.!: “ಸಾಮಾನ್ಯವಾಗಿ ವಿಮಾನಗಳು ಟೇಕ್‌ಆಫ್ ಆಗಲು 550 ಮೀ. ಹಾಗೂ ರನ್‌ವೇಗೆ ಇಳಿಯುವಾಗ 400 ಮೀ. ದೂರದವರೆಗೆ ಸ್ಪಷ್ಟವಾಗಿ ಕಾಣುವಂತಿರಬೇಕು. ಆದರೆ, ಶುಕ್ರವಾರ ರಾತ್ರಿ 10.30ರಿಂದ ಶನಿವಾರ ಬೆಳಗ್ಗೆ 8.30ರವರೆಗೆ ಈ ವಿಜಿಬಿಲಿಟಿ ಕೇವಲ 50 ಮೀ. ಇತ್ತು’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಚಳಿಗಾಲದ ಸಂದರ್ಭದಲ್ಲಿ ಇದು ಸಹಜ ಪ್ರಕ್ರಿಯೆ. ಕಳೆದ ವಾರ ಕೂಡ ಇದು ಆಗಿತ್ತು ಎಂದೂ ಅವರು ಸ್ಪಷ್ಟಪಡಿಸಿದರು. ಡಿ. 24ರಂದು ಎಂಟು ವಿಮಾನಗಳ ಹಾರಾಟ ರದ್ದಾಗಿತ್ತು. 98 ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದರು.